ಪರಿಹಾರ ವಿತರಣೆಯಲ್ಲಿ ತಾರತಮ್ಯರೈತರಿಗೆ ಸೂಕ್ತ ಪರಿಹಾರ ಕಲ್ಪಿಸಿ:ಹೊನ್ನಕೇರಿ

ಅಫಜಲಪುರ:ಸೆ.15:ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ.ಆದ್ದರಿಂದ ಸರ್ಕಾರ ಪರಿಹಾರ ವಿತರಣೆ ಮಾಡಲು ಮುಂದಾಗಿದೆ ಆದರೆ ಕಲಬುರಗಿ ಜಿಲ್ಲೆಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷರಾದ ಭೀಮಾಶಂಕರ ಹೊನ್ನಕೇರಿ ಆರೋಪಿಸಿದರು.ಈ ಕುರಿತು ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು ದೇಶ ವಿದೇಶಗಳಿಗೆ ತೊಗರಿ ರಫ್ತು ಮಾಡುವ ತೊಗರಿ ನಾಡು ಎಂದೆ ಹೆಸರುವಾಸಿಯಾಗಿರುವ ನಮ್ಮ ಜಿಲ್ಲೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ.ಈಗಾಗಲೇ ಬೇರೆ ಜಿಲ್ಲೆಗಳಲ್ಲಿ ಪರಿಹಾರ ವಿತರಣೆ ನಡೆದಿದೆ ಆದರೆ ನಮ್ಮ ಜಿಲ್ಲೆಯಲ್ಲಿ ಮಾತ್ರ ಇದೀಗ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.ಕಾಟಾಚಾರಕ್ಕಾಗಿ ಪರಿಹಾರ ನೀಡುವುದನ್ನು ಬಿಟ್ಟು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಹೆಕ್ಟರ್ ಗೆ 25 ಸಾವಿರ ರೂ. ಪರಿಹಾರ ನೀಡುವ ಮೂಲಕ ರೈತರ ಕಣ್ಣೀರು ವರೆಸುವ ಕೆಲಸ ಮಾಡಬೇಕಾಗಿದೆ.ಬಹಳಷ್ಟು ಹಳ್ಳಿಗಳಲ್ಲಿ ಸತತ ಮಳೆಯಿಂದಾಗಿ ಮನೆಗಳು ಬಿದ್ದಿವೆ ಇದನ್ನು ಸರಿಯಾದ ರೀತಿಯಲ್ಲಿ ಸರ್ಕಾರ ಸಮೀಕ್ಷೆ ನಡೆಸಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡಲು ನೆರವು ನೀಡಬೇಕು.ನಮ್ಮ ಜಿಲ್ಲೆ ರೈತರು ಬೆಳೆದಿರುವ ಕಬ್ಬು ಸಾಕಷ್ಟು ಗುಣಮಟ್ಟದಿಂದ ಕೂಡಿದೆ ಆದರೂ ಸಹ ಕಡಿಮೆ ದರದಲ್ಲಿ ಖರೀದಿಸಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ಮೋಸ ಮಾಡುತ್ತಿದ್ದಾರೆ.ಇತರೆ ಜಿಲ್ಲೆಯ ಕಾರ್ಖಾನೆಗಳಲ್ಲಿ 3 ಸಾವಿರ ರೂ.ಕ್ಕಿಂತಲೂ ಹೆಚ್ಚಿನ ದರದಲ್ಲಿ ಕಬ್ಬು ಖರೀದಿ ಮಾಡುತ್ತಾರೆ ಆದರೆ ನಮ್ಮ ಜಿಲ್ಲೆಯಲ್ಲಿ ಮಾತ್ರ ಕಡಿಮೆ ದರದಲ್ಲಿ ಕಬ್ಬು ಖರೀದಿ ಮಾಡುತ್ತಿದ್ದರು ಸಹ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ.ಇದನ್ನು ಗಂಭೀರವಾಗಿ ಪರಿಗಣಿಸಿ ಕಬ್ಬು ಕಟಾವು ಮಾಡೋದಕ್ಕಿಂತ ಮುಂಚೆ ರೈತರ ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂ.ದರ ನಿಗದಿಪಡಿಸಬೇಕು.ಸರಕಾರ ಈ ಎಲ್ಲಾ ಬೇಡಿಕೆಗಳನ್ನು 15 ದಿನಗಳಲ್ಲಿ ಪೂರೈಸದಿದ್ದಲ್ಲಿ ಕಾಂಗ್ರೆಸ್ ಪಕ್ಷದಿಂದ ಉಗ್ರವಾದ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.