‘ಪರಿಹಾರ ಮೊತ್ತವನ್ನು ನೀಡುವಲ್ಲಿರಾ.ಹೆದ್ದಾರಿ ಪ್ರಾಧಿಕಾರ ವಿಫಲ’


ಮಂಗಳೂರು, ನ.೧೭- ರಾಷ್ಟ್ರೀಯ ಹೆದ್ದಾರಿ ೧೬೯ರ ಅಗಲೀಕರಣ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಪರಿಹಾರ ಮೊತ್ತವನ್ನು ನೀಡುವಲ್ಲಿ ರಾ.ಹೆ.ಪ್ರಾಧಿಕಾರ ವಿಫಲವಾಗಿದೆ. ಪ್ರಾರಂಭದಲ್ಲಿ ತಯಾರಿಸಿದ ಸಾಣೂರು, ಪಡುಮಾರ್ನಾಡ್ ಹಾಗೂ ಪುತ್ತಿಗೆ ಗ್ರಾಮದ  ಅವಾರ್ಡ್ ಸಿಂಧುವೆಂದು ಹೈಕೋರ್ಟ್ ತೀರ್ಪು ನೀಡಿ ಒಂದೂವರೆ ತಿಂಗಳು ಆದರೂ ಹೆದ್ದಾರಿ ಪ್ರಾಧಿಕಾರ ಮಾತ್ರ ಭೂಪರಿಹಾರ ಬಿಡುಗಡೆ ಮಾಡಿಲ್ಲ ಎಂದು ರಾ.ಹೆ ೧೬೯ರ ಭೂಮಾಲಿಕರ ಹೋರಾಟ ಸಮಿತಿ ಆರೋಪಿಸಿದೆ.
ನಿನ್ನೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷರಾದ ಮರಿಯಮ್ಮ ಥೋಮಸ್, ಮುಂದಿನ ೩೦ ದಿನದೊಳಗೆ ಅವಾರ್ಡ್ ಆದೇಶದಂತೆ ಸಂಬಂಧಿಸಿ ಭೂಮಾಲಕರಿಗೆ ಪರಿಹಾರ ಪಾವತಿಗೆ ಇಲಾಖೆ ಕ್ರಮಕೈಗೊಳ್ಳದಿದ್ದಲ್ಲಿ ಪದವು ಗ್ರಾಮದ ಭೂಸ್ವಾಧೀನತೆಗೆ ಒಳಪಟ್ಟ ಜಮೀನಿನ ಮಾಲಕರು ಒಂದು ಇಂಚು ಕೂಡ ಜಮೀನು ಬಿಟ್ಟುಕೊಡುವುದಿಲ್ಲ ಎಂದರು. ಬಿಕರ್ನಕಟ್ಟೆ-ಸಾಣೂರು ರಾ.ಹೆದ್ದಾರಿ ೧೬೯ರ ರಸ್ತೆ ಅಗಲೀಕರಣದ ಬಗ್ಗೆ ಈಗಾಗಲೇ ಶೇ.೩೦ರಷ್ಟು ಮಾತ್ರ ಭೂಸ್ವಾಧೀನವಾಗಿದೆ. ಇದರ ಮಧ್ಯೆಯೇ ರಸ್ತೆ ನಿರ್ಮಾಣದ ಬಗ್ಗೆ ಟೆಂಡರ್ ವಹಿಸಿಕೊಂಡ ಕಂಪೆನಿಗೆ ಆದೇಶ ನೀಡಿರುವುದು ಹಾಸ್ಯಾಸ್ಪದ. ಭೂಸ್ವಾಧೀನವಾಗದೆ ಹಾಗೂ ಭೂಮಾಲಕರಿಗೆ ಪರಿಹಾರ ನೀಡದೆ ಟೆಂಡರ್ ಆದೇಶ ನೀಡಿರುವುದು ಎಷ್ಟು ಸರಿ ಎಂದವರು ಪ್ರಶ್ನಿಸಿದರು. ಭೂಪರಿಹಾರ ನೀಡಲು ೮೦೦ ಕೋ.ರೂಗಳಷ್ಟು ಅಗತ್ಯವಿದೆ. ಈಗ ೨೫೦ ಕೋ.ರೂ ಗಳನ್ನು ನೀಡಲಾಗಿದೆ ಎಂದು ಆರ್‌ಟಿಐನಲ್ಲಿ ನಾವು ಕೇಳಿದ ಪ್ರಶ್ನೆಗೆ ಹೆದ್ದಾರಿ ಇಲಾಖೆ ಉತ್ತರಿಸಿದೆ. ಹಾಗಾದರೆ ಭೂಪರಿಹಾರ ಎಲ್ಲರಿಗೂ ನೀಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಭೂಸ್ವಾಧೀನ ಆಗುವ ಮುನ್ನ ಟೆಂಡರ್ ಕರೆದಿದ್ದು ಯಾಕೆ ಎಂದು ಪ್ರಶ್ನಿಸಿದರು. ಹೋರಾಟಗಾರ ಬ್ರಿಜೇಶ್ ಶೆಟ್ಟಿ ಮಾತನಾಡಿ, ಕುಲಶೇಖರ-ಸಾಣೂರು ಹೊಸ ಹೆದ್ದಾರಿ ಉದ್ದ ೪೧ ಕಿ.ಮೀ ಆಗಬೇಕಿತ್ತು. ಆದರೆ, ಗುರುಪುರದಲ್ಲಿ ಕೆಲವರ ಹಿತಾಸಕ್ತಿಗೆ ಒಳಗಾಗಿ ಸುತ್ತುಬಳಸಿ ಹೆದ್ದಾರಿ ಮಾಡುವ ಕಾರಣ ದಿಂದ ಉದ್ದ ೪೬ ಕಿ.ಮೀ. ಆಗಲಿದೆ. ಭೂಪರಿಹಾರ ಸಮರ್ಪಕವಾಗಿ ನೀಡದೆ ಕಾಮಗಾರಿ ನಡೆಸಲು ಅವಕಾಶ ಕೊಡುವುದಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ರತ್ನಾಕರ ಶೆಟ್ಟಿ, ಪ್ರಕಾಶ್‌ಚಂದ್ ಉಪಸ್ಥಿತರಿದ್ದರು.