ಪರಿಹಾರ, ಪ್ಯಾಕೇಜ್‌ಗೆ ಆಗ್ರಹ, ಅತಿಥಿ ಉಪನ್ಯಾಸಕರ ಆನ್‌ಲೈನ್ ಚಳುವಳಿ

ದಾವಣಗೆರೆ.ಜೂ.೪; ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರನ್ನು ಕೂಡಲೇ ಸೇವೆಗೆ ಸೇರಿಸಿಕೊಳ್ಳಲು ಹಾಗೂ ಪರಿಹಾರ ಪ್ಯಾಕೇಜ್ ಒದಗಿಸುವಂತೆ ಆನ್‌ಲೈನ್ ಚಳುವಳಿ ಮುಖೇನ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ರಾಜ್ಯವ್ಯಾಪಿ ಸುಮಾರು 14,500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು 413 ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಲಾಕ್‌ಡೌನ್ ಹಾಗೂ ಹಿಂದಿನ ಸೆಮಿಸ್ಟರ್‌ನಲ್ಲಿ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರನ್ನು ಸೇವೆಗೆ ನಿಯೋಜಿಸಿದ್ದರಿಂದ ಸರಿಯಾದ ವೇತನ ಸಿಗದೇ ಅತಿಥಿ ಉಪನ್ಯಾಸಕರ ಸಮಸ್ಯೆಗಳು ಹಲವು ಪಟ್ಟು ಉಲ್ಬಣಗೊಂಡಿವೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಈ ಅವಧಿಯಲ್ಲಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಹಲವಾರು ಅತಿಥಿ ಉಪನ್ಯಾಸಕರು ಕೊರೋನಾದಿಂದ ಮೃತಪಟ್ಟಿದ್ದಾರೆ. ಆತ್ಮಹತ್ಯೆ ಮಾಡಿಕೊಂಡು ಮತ್ತು ಗಂಭೀರ ಖಾಯಿಲೆಗಳಿಂದಲೂ ನರಳಿ ಸಾವಿಗೀಡಾಗಿದ್ದಾರೆ. ಎಷ್ಟೋ ಅತಿಥಿ ಉಪನ್ಯಾಸಕರು ಹಣ್ಣು – ಹಂಪಲು, ತರಕಾರಿ ಮಾರುತ್ತ ಜೀವನ ಸಾಗಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದೆ.
ಅತಿಥಿ ಉಪನ್ಯಾಸಕರು ಕೆಲಸವಿಲ್ಲದೇ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಹೊರೆಯ ಜೊತೆಯಲ್ಲಿ ಮಾನಸಿಕ ಒತ್ತಡವೂ ಅವರನ್ನು ತೀವ್ರವಾಗಿ ಕುಗ್ಗಿಸಿದೆ. ಅತಿಥಿ ಉಪನ್ಯಾಸಕರ ಸಂಕಷ್ಟವನ್ನು ಅರಿತು ಹೋರಾಟದ ಫಲವಾಗಿ ಕಳೆದ ವರ್ಷ ತಮ್ಮ ಸರ್ಕಾರವು ಅವರ 5 ತಿಂಗಳ ಬಾಕಿ ವೇತನವನ್ನು ಬಿಡುಗಡೆ ಮಾಡಿತ್ತು. ಅದಾದ ನಂತರ 2020-21ನೇ ಸಾಲಿನ ಪದವಿ ತರಗತಿಗಳು ಪ್ರಾರಂಭವಾದಾಗ ಇಲಾಖೆ ಕೇವಲ ಶೇ. 50ರಷ್ಟು ಅತಿಥಿ ಉಪನ್ಯಾಸಕರನ್ನು ಸೇವೆಗೆ ನಿಯೋಜನೆಗೊಳಿಸಿತ್ತು. ನಂತರ ಆಗ್ರಹದ ಮೇರೆಗೆ ಎಲ್ಲರನ್ನೂ ಸೇವೆಗೆ ಸೇರಿಸಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು. ಒಟ್ಟಾರೆ ಅತಿಥಿ ಉಪನ್ಯಾಸಕರ ಬದುಕು ಅತಂತ್ರವಾಗಿ ತೀವ್ರ ಸಂಕಷ್ಟದಲ್ಲಿದೆ ಎಂದು ಸಮಿತಿ ತಿಳಿಸಿದೆ.
ಕೊರೋನಾದಿಂದ ಮೃತಪಟ್ಟ ಅತಿಥಿ ಉಪನ್ಯಾಸಕರ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ. ಈ ಕೂಡಲೇ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು. ಕೊರೋನಾದಿಂದ ಮೃತಪಟ್ಟ ಅತಿಥಿ ಉಪನ್ಯಾಸಕರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಈಗ ನಡೆಯುತ್ತಿರುವ ಆನ್‌ಲೈನ್ ತರಗತಿಗಳಿಗೆ ಈ ಹಿಂದೆ ಕಾರ್ಯನಿರ್ವಹಿಸಿದ ಎಲ್ಲಾ ಅತಿಥಿ ಉಪನ್ಯಾಸಕರನ್ನು ನಿಯೋಜಿಸಬೇಕು. ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿದೆ.