ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ

ಬ್ಯಾಡಗಿ, ಜೂ 4: ಒಂದೂವರೆ ತಿಂಗಳಿನಿಂದ ಎರಡನೇ ಹಂತದ ಕೊರೋನಾ ಸೋಂಕು ಹೆಚ್ಚಾಗಿ ಸಾವಿರಾರು ಜನರು ಸಾವನ್ನಪ್ಪಿರುವ ಪ್ರಕರಣಗಳು ವರದಿಯಾಗಿದ್ದು, ಸರ್ಕಾರ ಕಠಿಣ ನಿಲುವುಗಳನ್ನು ಕೈಗೊಂಡರೂ ಕೂಡ ಸಮರ್ಪಕವಾಗಿ ಸೋಂಕನ್ನು ತಡೆಗಟ್ಟಲು ಸಾಧ್ಯವಾಗಿಲ್ಲ, ಲಾಕ್‍ಡೌನ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗಿ ಜನರನ್ನು ಗುರುತಿಸಿ ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ದ್ವಂದ ನೀತಿಗಳಿಂದ ವಿಫಲಗೊಂಡಿದೆ ಮಾಜಿ ಸಚಿವ ಬಸವರಾಜ ಶಿವಣ್ಣನವರ ಆರೋಪಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತಾಲೂಕಿನ ಕಾಂಗ್ರೇಸ್ ಪಕ್ಷದ ಪರವಾಗಿ ಬಸವರಾಜ ಶಿವಣ್ಣನವರ ವೈಯುಕ್ತಿಕವಾಗಿ 2.5 ಲಕ್ಷ ರೂಗಳ ವೆಚ್ಚದ ಆಕ್ಸಿಜನ್ ಯಂತ್ರ, ಫೇಸ್ ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ದೇಣಿಗೆಯಾಗಿ ನೀಡಿದರಲ್ಲದೇ ರೋಗಿಗಳಿಗೆ ಉಪಹಾರ ವಿತರಿಸಿ ಮಾತನಾಡಿದ ಅವರು, ಕೊರೋನಾ ಸೋಂಕು ತಗುಲಿ ಇಡೀ ದೇಶದ ಜನರು ಸಂಕಷ್ಟವನ್ನು ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲಾ ಪಕ್ಷಗಳು ಪಕ್ಷಾತೀತವಾಗಿ ಸೋಂಕನ್ನು ತಡೆಗಟ್ಟುವುದರೊಂದಿಗೆ ಸಂಕಷ್ಟದಲ್ಲಿರುವ ಬಡಕುಟುಂಬಗಳಿಗೆ ಸಹಾಯ,ಸಹಕಾರ ನೀಡುವ ಮೂಲಕ ತಮ್ಮ ಬದ್ದತೆಯನ್ನು ಪ್ರದರ್ಶಿಸಬೇಕಿದೆ. ಜಿಲ್ಲಾಧಿಕಾರಿಗಳು ಪರ್ಯಾಯ ವ್ಯವಸ್ಥೆ ಮೂಲಕ ಬಡವರಿಗೆ ಆಹಾರ ಒದಗಿಸಲು ವ್ಯವಸ್ಥೆ ಮಾಡುವ ಮೂಲಕ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಒದಗಿಸಲು ತುರ್ತು ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮರ್ಪಕವಾಗಿ ರೋಗ ಪರೀಕ್ಷೆ ಕಾರ್ಯ ನಡೆದಿಲ್ಲ, ಕಾಟಾಚಾರಕ್ಕೆ ಮಾತ್ರ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಆದೇಶದಲ್ಲಿರುವಂತೆ ತಾಲೂಕಾಡಳಿತ ಕೆಲಸ ನಿರ್ವಹಿಸುವಲ್ಲಿ ವಿಫಲವಾಗಿದೆ. ಸರ್ಕಾರದ ದ್ವಂದ್ವ ನಿಲುವುಗಳು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕೊರೋನಾ ಸೋಂಕು ಉಲ್ಬಣಗೊಳ್ಳಲು ಕಾರಣವಾಗಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಲ್ಲದೇ ಸಂಕಷ್ಟಕ್ಕೆ ಒಳಗಾಗಿರುವ ಜನರ ನೆರವಿಗೂ ಮುಂದಾಗಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಜಿ.ಪಂ.ಅಧ್ಯಕ್ಷ ಏಕನಾಥ ಭಾನುವಳ್ಳಿ, ರಾಣೆಬೆನ್ನೂರ ಎಪಿಎಂಸಿ ಅಧ್ಯಕ್ಷ ಬಸವರಾಜ ಸವಣೂರ, ಜಿಲ್ಲಾ ಕಾಂಗ್ರೇಸ್ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ, ತಾಲೂಕಾ ಆರೋಗ್ಯಾಧಿಕಾರಿ ಡಾ.ಸುಹೀಲ್ ಹರವಿ, ಆಸ್ಪತ್ರೆಯ ಆಡಳಿತಾಧಿಕಾರಿ ಪುಟ್ಟರಾಜ, ಮುಖಂಡರಾದ ಬೀರಪ್ಪ ಬಣಕಾರ, ದಾನಪ್ಪ ಚೂರಿ, ಪ್ರಕಾಶ ಬನ್ನಿಹಟ್ಟಿ, ರಮೇಶ ಸುತ್ತಕೋಟಿ, ಎ.ಎ.ಸೌದಾಗರ, ಶಂಕರ ಕುಸಗೂರು, ಮಂಜುನಾಥ ಭೋವಿ, ಯೂನಸಅಹ್ಮದ ಸವಣೂರು, ದುರುಗೇಶ ಗೋಣೆಮ್ಮನವರ, ಡಿ.ಎಚ್.ಬುಡ್ಡನಗೌಡ್ರ, ರಮೇಶ ಮೋಟೆಬೆನ್ನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.