ಪರಿಹಾರ ಧನ ಬಿಡುಗಡೆಗೆ ಆಗ್ರಹ


(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಜು.30: ಕಳೆದ 2022-23 ಸಾಲಿನ ಬಾಕಿಯಿರುವ 862 ರೈತರ ಬೆಳೆ ವಿಮೆಯ ಪರಿಹಾರ ಧನವನ್ನು ಕೂಡಲೇ ಬಿಡುಗಡೆ ಮಾಡಲು ರಾಜ್ಕ ಸರ್ಕಾರ ಕ್ರಮ ವಹಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 2022-23ನೇ ಸಾಲಿನಲ್ಲಿ ಕೃಷಿ ವಿಮೆ ಕಂತು ಕಟ್ಟಿದ 21840 ರೈತರ ಪೈಕಿ 862 ರೈತರಿಗೆ ವಿವಿಧ ಕಾರಣಗಳ ನೆಪವೊಡ್ಡಿ ಇಲ್ಲಿಯವರೆಗೂ ವಿಮೆಯ ಪರಿಹಾರ ಧನ ಮಂಜೂರಾಗಿಲ್ಲ, ಈ ಬಗ್ಗೆ ಸರಕಾರಕ್ಕೆ ವರದಿ ನೀಡುವಾಗ ಆಗಿರುವ ಲೋಪ ಸರಿಪಡಿಸಿ ಕೂಡಲೇ ರೈತರಿಗೆ ವಿಮೆ ಹಣ ಮಂಜೂರು ಮಾಡಬೇಕೆಂದು ಆಗ್ರಸಿಹಿದರು.
ಮುಖಂಡ ಗಂಗಣ್ಣ ಎಲಿ ಮಾತನಾಡಿ, ದೇಶದ ಬೆನ್ನೆಲುಬಾಗಿರುವ ರೈತರು ಸಾಲಸೂಲ ಮಾಡಿ ಮುಂಗಾರು ಬಿತ್ತಿದ್ದು, ಫಲವತ್ತಾಗಿ ಬೆಳೆದಿದ್ದ ಬೆಳೆ ಅಕಾಲಿಕ ಮಳೆಗೆ ಹಾನಿಗೀಡಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದಾಗಿ ರೈತರ ಬದುಕು ಬೀದಿಗೆ ಬಿದ್ದಿದ್ದು, ಹಾನಿಯಾದ ಸನ್ನಿವೇಶ ನೋಡಿದ ಕೆಲ ರೈತರು ದಿಕ್ಕು ತೋಚದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲ ರೈತರು ಜುಗುಪ್ಸೆಯಲ್ಲಿ ಜೀವನ ದೂಡುತ್ತಿದ್ದಾರೆ. ಇವೆಲ್ಲ ಗೊತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿರುವುದು ಬಹುದೊಡ್ಡ ದೌರ್ಭಾಗ್ಯದ ಸಂಗತಿ ಎಂದು ದೂರಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಕಿರಣ ಗಡಿಗೋಳ ಮಾತನಾಡಿ, ಬೆಳೆ ನಾಶವಾಗಿರುವ ಕುರಿತು ಸರಕಾರಕ್ಕೆ ವರದಿ ಸಲ್ಲಿಕೆ ಆಗಿದ್ದರೂ ಸಹ ವಿಮೆ ಕಟ್ಟಿರುವ ರೈತರಿಗೆ ವಿಮೆಯ ಪರಿಹಾರ ಧನ ಇನ್ನೂ ಬಂದಿಲ್ಲ. ಕಳೆದ 2022-23 ರಲ್ಲಿಯ 862 ರೈತರ 1.72 ಕೋಟಿ ಬಾಕಿ ಹಣ ಬರಬೇಕಾಗಿದೆ. ವಿಮೆ ಮಂಜೂರಾತಿಗಾಗಿ ರೈತರು, ಬ್ಯಾಂಕ್, ಕೃಷಿ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿಗೆ ಓಡಾಡಿ ಸುಸ್ತಾಗಿ ಹೋಗಿದ್ದಾರೆ. ಈ ಕೂಡಲೇ ವಿಮೆ ಒದಗಿಸದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮೌನೇಶ ಕಮ್ಮಾರ, ಕರಬಸಪ್ಪ ಶಿರಗಂಬಿ, ವಿರುಪಾಕ್ಷಪ್ಪ ಗುಡುಗೂರ, ಮಂಜುನಾಥ ಹಿರೇಮಠ, ಪಾಂಡು ಸುತಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.