ಪರಿಹಾರ ಒದಗಿಸಲು ವಿಳಂಬ: ಶಾಸಕರಿಂದ ತರಾಟೆ


ಬ್ಯಾಡಗಿ,ಮಾ.28: ಕಳೆದ ವರ್ಷ ಅತಿವೃಷ್ಠಿಯಿಂದ ಮನೆ ಹಾನಿಗೊಳಗಾಗಿರುವ ಫಲಾನುಭವಿಗಳಿಗೆ ಈವರೆಗೂ ಪರಿಹಾರ ಒದಗಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ತಹಶೀಲ್ದಾರ ಹಾಗೂ ಸಿಬ್ಬಂದಿ ವರ್ಗದವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಬೇರೆಡೆ ವರ್ಗಾವಣೆ ಮಾಡಿಕೊಂಡು ಹೋಗಿ ಎಂದು ಹರಿಹಾಯ್ದ ಘಟನೆ ಸೋಮವಾರ ತಾಲೂಕ ಕಚೇರಿಯಲ್ಲಿ ನಡೆದಿದೆ.
ಪಟ್ಟಣದ ತಾಲೂಕಾ ಕಚೇರಿಯ ಸಭಾಭವನದಲ್ಲಿ ನಡೆದ ತಾಲೂಕಿನ ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ತಾಲೂಕಾ ಆಡಳಿತದ ಕಾರ್ಯವೈಖರಿಯ ಕುರಿತು ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ ಶಾಸಕರು, ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ಪರಿಶೀಲನೆ ನಡೆಸಿದ್ದು, ಫಲಾನುಭವಿಗಳು ವಾಸಿಸಲು ತಮ್ಮ ಮನೆಗಳನ್ನು ನಿರ್ಮಿಸಿಕೊಳ್ಳಲು ಪರದಾಡುವಂತಾಗಿದೆ. ಸರ್ಕಾರದ ಅನುದಾನವನ್ನು ಇವರ ಜೇಬಿನಿಂದ ತೆಗೆದು ಕೊಟ್ಟವರ ಹಾಗೇ ಮಾಡುತ್ತಿರುವ ತಹಶೀಲ್ದಾರ ಮತ್ತು ಸಿಬ್ಬಂದಿ ವರ್ಗದವರು ಮನೆ ಕಳೆದುಕೊಂಡವರನ್ನು ಸತಾಯಿಸುವುದು ಯಾವ ನ್ಯಾಯ..? ಎಂದು ಆಕ್ರೋಷ ವ್ಯಕ್ತಪಡಿಸಿದರು.
ಅಲ್ಲದೇ ತಾಲೂಕಿನಲ್ಲಿ ಬಹುವರ್ಷಗಳಿಂದ ಭೂಸಾಗುವಳಿ ಮಾಡುತ್ತಿರುವ ಬಡ ಕುಟುಂಬದ ಭೂರಹಿತ ಜನರಿಗೆ ಅಕ್ರಮ ಸಕ್ರಮ ಯೋಜನೆಯಡಿ ಮಂಜೂರಾದ ಹಕ್ಕುಪತ್ರಗಳನ್ನು ನೀಡಲು ಸಹ ಮೀನ ಮೇಷ ಎಣಿಸುತ್ತಿರುವ ತಹಶೀಲ್ದಾರ ಕಚೇರಿಯ ಸಿಬ್ಬಂದಿಯ ವರ್ತನೆಯಿಂದ ಜನರು ರೋಸಿ ಹೋಗಿದ್ದಾರೆ. ದಿನವೂ ಅಧಿಕಾರಿ ಮತ್ತು ಸಿಬ್ಬಂದಿಗಳ ಬಗ್ಗೆ ದೂರುಗಳನ್ನು ಕೇಳಿ ಕೇಳಿ ಸಾಕಾಗಿದೆ ಎಂದು ತಾಲೂಕ ಕಚೇರಿಯ ಕಾರ್ಯವೈಖರಿಯ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ಫಕ್ಕೀರಮ್ಮ ಚಲುವಾದಿ, ಉಪಾಧ್ಯಕ್ಷೆ ಮಲ್ಲಮ್ಮ ಪಾಟೀಲ, ಪಿಎಲ್ ಡಿ ಬ್ಯಾಂಕ್ ಸದಸ್ಯ ಸುರೇಶ ಯತ್ನಳ್ಳಿ, ಜಿತೇಂದ್ರ ಸುಣಗಾರ, ತಹಶೀಲ್ದಾರ ಎಸ್. ಎ. ಪ್ರಸಾದ್ ಸೇರಿದಂತೆ ತಾಲೂಕ ಕಚೇರಿಯ ಸಿಬ್ಬಂದಿ ಮತ್ತು ಇನ್ನಿತರರು ಉಪಸ್ಥಿತರಿದ್ದರು.