ಪರಿಸ್ಥಿತಿ ಅವಲೋಕಿಸಿ ಲಾಕ್‌ಡೌನ್

ಬೆಂಗಳೂರು,ಮೇ ೩೦- ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಿಸುವ ಬಗ್ಗೆ ತಜ್ಞರು ಇದುವರೆಗೂ ಯಾವುದೇ ವರದಿಯನ್ನು ಸರ್ಕಾರಕ್ಕೆ ನೀಡಿಲ್ಲ. ಪರಿಸ್ಥಿತಿಯನ್ನಾಧರಿಸಿ ಲಾಕ್‌ಡೌನ್ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಪೌರ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ವಿಸ್ತರಣೆ ಬಗ್ಗೆ ಚರ್ಚೆಗಳು ನಡೆದಿವೆ. ಜೂ. ೫ ಇಲ್ಲವೆ ೬ ರಂದು ಸಚಿವರುಗಳು, ತಜ್ಞರುಗಳ ಜತೆ ಚರ್ಚಿಸಿ, ಲಾಕ್‌ಡೌನ್ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದರು. ಜೂ. ೭ರವರೆಗೂ ಲಾಕ್‌ಡೌನ್ ಇದೆ. ಅಲ್ಲಿಯವರೆಗೂ ಸೋಂಕು ಎಷ್ಟು ಇಳಿಕೆಯಾಗುತ್ತಿದೆ ಎಂಬುದನ್ನು ಗಮನಿಸುತ್ತೇವೆ.
ಕೆಲವು ಜಿಲ್ಲೆಗಳಲ್ಲಿ ಸೋಂಕು ನಮ್ಮ ನಿರೀಕ್ಷೆ ಮೀರಿ ಸೋಂಕು ಜಾಸ್ತಿ ಇದೆ. ಹಾಗಾಗಿ, ಪರಿಸ್ಥಿತಿಯನ್ನು ನೋಡಿಕೊಂಡು ತಜ್ಞರು ಹಾಗೂ ಸಚಿವರುಗಳ ಜತೆ ಜೂ. ೫ ಇಲ್ಲವೆ ೬ ರಂದು ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬರುವುದಾಗಿ ಹೇಳಿದರು.
ಕೇಂದ್ರ, ಗೃಹ ಇಲಾಖೆ ಲಾಕ್‌ಡೌನ್ ವಿಸ್ತರಿಸುವ ತೀರ್ಮಾನವನ್ನು ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದೆ. ಪರಿಸ್ಥಿತಿಯನ್ನು ನೋಡಿಕೊಂಡು ತೀರ್ಮಾನ ಮಾಡಿ ಎಂದು ಹೇಳಿದೆ. ಅದರಂತೆ ತೀರ್ಮಾನ ಮಾಡುತ್ತೇವೆ ಎಂದರು.
೨ನೇ ಪ್ಯಾಕೇಜ್
ಲಾಕ್‌ಡೌನ್ ಬಾಧಿತರಿಗೆ ರಾಜ್ಯಸರ್ಕಾರ ಈಗಾಗಲೇ ೧,೨೫೦ ಕೋಟಿ ರೂ.ಗಳ ಪ್ಯಾಕೇಜ್‌ನ್ನು ಘೋಷಿಸಿದೆ. ೨-೩ ದಿನಗಳಲ್ಲಿ ೨ನೇ ಪ್ಯಾಕೇಜ್‌ನ್ನು ಪ್ರಕಟಿಸುತ್ತೇನೆ. ೨ನೇ ಪ್ಯಾಕೇಜ್‌ನ ತಯಾರಿ ನಡೆದಿದೆ ಎಂದರು.
ಸೇವಾಕಾರ್ಯ
ಸೇಕೇಂದ್ರದ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ೭ ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂದು ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ರಾಜ್ಯದ ೨೯ ಸಾವಿರ ಹಳ್ಳಿಗಳಲ್ಲಿ ’ಸೇವಾ ಹೀ’ ಸಂಘಟನೆ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ೧ ಕೋಟಿ ಜನರಿಗೆ ನೆರವು ಒದಗಿಸುವ ಗುರಿ ಹೊಂದಿದ್ದೇವೆ ಎಂದರು.
ರಾಜ್ಯದ ೨೯ ಸಾವಿರ ಹಳ್ಳಿಗಳಲ್ಲಿ ೨೫ ಲಕ್ಷ ಕಾರ್ಯಕರ್ತರು ಸೇವಾ ಹೀ ಸಂಘಟನೆ ಹೆಸರಿನಲ್ಲಿ ಬಡವರಿಗೆ ಆಹಾರ ಕಿಟ್, ವಿದ್ಯಾರ್ಥಿಗಳ ಶುಲ್ಕ ಪಾವತಿ ಸೇರಿದಂತೆ ಹಲವು ಸೇವಾ ಚಟುವಟಿಕೆಗಳನ್ನು ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಚಾಲನೆ ನೀಡಿದ್ದೇನೆ ಎಂದರು.