ಪರಿಸರ ಸ್ವಚ್ಛತೆಗೆ ಮುಂದಾಗಲು ಕರೆ


ಬ್ಯಾಡಗಿ,ಆ.10: ಪ್ರತಿಯೊಬ್ಬರೂ ರಾಷ್ಟ್ರದ ಬಗ್ಗೆ ಗೌರವವನ್ನು ನೀಡುವ ಜೊತೆಗೆ ರಾಷ್ಟ್ರಾಭಿಮಾನವನ್ನು ಬೆಳೆಸಿಕೊಳ್ಳಬೇಕಲ್ಲದೇ, ಪ್ರತಿಯೊಂದು ಮನೆಗೆ ಒಂದು ಮರದಂತೆ, ಊರಿಗೆ ಒಂದು ವನ ನಿರ್ಮಿಸುವುದರ ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಮುಂದಾಗಬೇಕೆಂದು ಕುಮ್ಮೂರು ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಹಾವೇರಿ ತಿಳಿಸಿದರು.
ತಾಲೂಕಿನ ಕುಮ್ಮೂರು ಗ್ರಾಮದಲ್ಲಿ ಅಮೃತ ಸರೋವರ (ನರೇಗಾ)ಯೋಜನೆಯಡಿ ಕೈಗೆತ್ತಿಕೊಂಡಿರುವ ಕೆಂಚಮ್ಮನ ಹೊಂಡದ ಕಾಮಗಾರಿ ಸ್ಥಳದಲ್ಲಿ ಗ್ರಾಮ ಪಂಚಾಯತ ವತಿಯಿಂದ ಆಗಸ್ಟ್ 9ರಿಂದ 15ರವರೆಗೆ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ “ಮೇರಿ ಮಾಟಿ ಮೇರಾ ದೇಶ” ಕಾರ್ಯಕ್ರಮದಡಿ 75ಸಸಿಗಳನ್ನು ನೆಡಲು ಚಾಲನೆ ನೀಡುವ ಮೂಲಕ ಮಾತನಾಡಿದ ಅವರು, ಸ್ವಾತಂತ್ಯದ ಹಬ್ಬವು ರಾಷ್ಟ್ರದ ಜಾಗೃತಿಯ ಹಬ್ಬವಾಗಿದೆ. ಈ ಹಬ್ಬವು ದೇಶದ ಅಭಿವೃದ್ಧಿಯ ಜೊತೆಗೆ ಜಾಗತಿಕ ಶಾಂತಿಯನ್ನು ಸೂಸುವ ಹಬ್ಬವಾಗಿದೆ. ಇದರ ಅಂಗವಾಗಿ ಎಲ್ಲೆಡೆ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರದಲ್ಲಿ ಶಾಂತಿ ನೆಮ್ಮದಿಯನ್ನು ಕಾಪಾಡಬಹುದಾಗಿದೆ ಎಂದು ಹೇಳಿದರು.
ಗ್ರಾಪಂ ಅಭಿವೃಧ್ದಿ ಅಧಿಕಾರಿ ಗದಿಗೆಪ್ಪ ಕೊಪ್ಪದ ಮಾತನಾಡಿ, ಸ್ವಾತಂತ್ರ್ಯದ 75 ವರ್ಷಗಳ ಮಹೋತ್ಸವವು ಸ್ವಾತಂತ್ರ್ಯ ಹೋರಾಟದ ಉತ್ಸಾಹ, ಹುತಾತ್ಮರಿಗೆ ಗೌರವ ಮತ್ತು ಭಾರತ ನಿರ್ಮಾಣದ ಅವರ ಪ್ರತಿಜ್ಞೆಯನ್ನು ಅನುಭವಿಸುವಂತಹ ಮಹೋತ್ಸವವಾಗಿರಬೇಕು. ಈ ಮಹೋತ್ಸವವು 75 ವರ್ಷಗಳಲ್ಲಿ ಭಾರತ ದೇಶವು ಮಾಡಿದ ಸಾಧನೆಗಳನ್ನು ಜಗತ್ತಿಗೆ ತೋರಿಸುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಲ್ಲರಿಗೂ ಪಂಚ್ ಪ್ರಾಣ ಪ್ರತಿಜ್ಞೆಯನ್ನು ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ನೀಲವ್ವ ಹರಿಜನ, ಸದಸ್ಯೆ ಸುಶೀಲವ್ವ ಪಾಸಿ, ಮಾರುತಿ ಕಾಳಪ್ಪನವರ, ರೇಣುಕವ್ವ ತುಮರಿಕೊಪ್ಪ, ಶಾಂತವ್ವ ಅಸುಂಡಿ, ಕಾರ್ಯದರ್ಶಿ ಹನುಮಂತಪ್ಪ ನಡುವಿನಹಳ್ಳಿ, ತಾಲೂಕಾ ಟಿಐಈಸಿ ಸಂಯೋಜಕ ಶಾನವಾಜ ಚಿಣಗಿ, ಗಣೇಶ ತುಮರಿಕೊಪ್ಪ,
ಎಂಬಿಕೆ ಮಹಿಳಾ ಸಂಜೀವಿನಿ ಒಕ್ಕೂಟದ ಪಾರವ್ವ ಕಾಳಪ್ಪನವರ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ನೇತ್ರಾ ಹೂಗಾರ, ಗ್ರಾಮ ಕಾಯಕ ಮಿತ್ರೆ ಹೊನ್ನಮ್ಮ ಮಾಸಣಗಿ, ಶಾಲಾ ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.