ಪರಿಸರ ಸ್ವಚ್ಛತೆಗೆ ಪೌರಕಾರ್ಮಿಕರ ಕೊಡುಗೆ ಅನನ್ಯ: ಸರೋಜಿನಿ

ಮಂಗಳೂರು,ಸೆ.೨೪- ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯ. ಅವರ ಅವಿರತ ಶ್ರಮದ ಸೇವೆಗೆ ಪ್ರೋತ್ಸಾಹ ನೀಡುವ ಮೂಲಕ ಅವರ ಕೆಲಸವನ್ನು ಶ್ಲಾಘಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಸರೋಜಿನಿ ಅಭಿಪ್ರಾಯಪಟ್ಟರು.
ಅವರು ಸೆ. ೨೩ರ ಗುರುವಾರ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ವಚ್ಛ ಭಾರತ್ ಮಿಷನ್ ಹಾಗೂ ಬೆಂಗಳೂರಿನ ಸಾಹಸ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೫ನೇ ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಸ್ವಚ್ಛ ಕಾರ್ಮಿಕರಿಗೆ ಸನ್ಮಾನ ಹಾಗೂ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಸ್ಪಚ್ಚತೆ ನಿರ್ವಹಿಸುವ ಪೌರ ಕಾರ್ಮಿಕರ ಸೇವೆ ಹಾಗೂ ಅವರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವ ಸಲುವಾಗಿ ಪೌರ ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ. ಪರಿಸರ ಸ್ವಚ್ಛತೆಯ ಜೊತೆಗೆ ಜನರ ಮನೋಭಾವವನ್ನು ಬದಲಾಯಿಸುವುದು ಸ್ವಚ್ಛ ಭಾರತದ ಪರಿಕಲ್ಪನೆಯಾಗಿದೆ ಎಂದರು.
ಕೋವಿಡ್-೧೯ ಸಂದರ್ಭದಲ್ಲಿ ಪೌರಕಾರ್ಮಿಕರು ಸ್ವಚ್ಛತಾ ಸೇನಾನಿಗಳಾಗಿ ಕಾರ್ಯನಿರ್ವಹಿಸಿದ್ದು, ಅವರ ಸೇವೆ ಅವಿಸ್ಮರಣೀಯ ಎಂದು ಈ ಸಂದರ್ಭದಲ್ಲಿ ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಉತ್ತಮವಾಗಿ ಸ್ವಚ್ಛತಾ ಕಾರ್ಯ ನಿರ್ವಹಿಸಿದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು ಹಾಗೂ ರಕ್ಷಣಾ ಪರಿಕರಗಳನ್ನು ವಿತರಿಸಲಾಯಿತು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ನವೀನ್ ಚಂದ್ರ ಕುಲಾಲ್, ತಾಲೂಕು ಪಂಚಾಯತ್ ಮ್ಯಾನೇಜರ್ ಸುವರ್ಣ ಹೆಗ್ಡೆ, ಬೆಂಗಳೂರು ಸಾಹಸ್ ಸೇವಾ ಸಂಸ್ಥೆಯ ಸಮಾಲೋಚಕರು ಸುದೇಶ್ ಕಿಣಿ ಹಾಗೂ ವಿವಿಧ ಗ್ರಾಮ ಪಂಚಾಯತ್‌ನ ಪೌರಕಾರ್ಮಿಕರು ಉಪಸ್ಥಿತರಿದ್ದರು.