ಪರಿಸರ ಸ್ನೇಹಿ ದೀಪಾವಳಿ : ನಿಮ್ಮ ಹಬ್ಬದ ಆಚರಣೆ ಹೀಗಿರಲಿ.

 • ಹಣತೆಗಳ ಸಾಲು ಸಾಲು , ಬಣ್ಣಬಣ್ಣದ ಬೆಳಕಿನ ಚಿತ್ತಾರ ಮೂಡಿಸುವ ಆಕಾಶಬುಟ್ಟಿ, ಅಂಗಳದಲ್ಲಿ ವರ್ಣರಂಜಿತ ರಂಗೋಲಿ, ಬಿಸಿಬಿಸಿ ನೀರಿನ ಅಭ್ಯಂಜನ ಸ್ನಾನ, ಕಮ್ಮನೆಯ ಬಗೆಬಗೆಯ ತಿನಿಸುಗಳು,ಕಿವಿಗಡಚಿಕ್ಕುವ ಪಟಾಕಿ, ಅಕ್ಷರಪ್ರಿಯರಿಗೆ ನಿಯತಕಾಲಿಕೆಗಳ ವಿಶೇಷಾಂಕಗಳು …ಇದು ದೀಪಾವಳಿ ಎಂದರೆ ನಮ್ಮ ಕಣ್ಮುಂದೆ ಬರುವ ಆಪ್ತಚಿತ್ರಣ.

ಪೌರಾಣಿಕ ಹಿನ್ನೆಲೆಯ ಬೆಳಕಿನ ಹಬ್ಬ ದೀಪಾವಳಿ ಬಡವ ಬಲ್ಲಿದರಿಗೂ ಬಹು ದೊಡ್ಡ ಹಬ್ಬ. ಆದರೆ ಆಧುನಿಕತೆಯ ಭರಾಟೆಯಲ್ಲಿ ಈ ಹಬ್ಬದ ಕೆಲವು ಆಚರಣೆಗಳು ಪರಿಸರಕ್ಕೆ ಹಾನಿಯಾಗಿ ಪರಿಣಮಿಸುತ್ತಿವೆ. ಈ ಹಬ್ಬದಲ್ಲಿ ಬಳಸುವ ಪಟಾಕಿಗಳು ವಾಯು ಮತ್ತು ಶಬ್ದಮಾಲಿನ್ಯ ಉಂಟು ಮಾಡುತ್ತಿವೆ. ರಾಸಾಯನಿಕಗಳನ್ನು ಮಿಶ್ರ ಮಾಡಿರುವ ರಂಗೋಲಿಬಣ್ಣಗಳು ಮಣ್ಣನ್ನು ಕಲುಷಿತಗೊಳಿಸುತ್ತವೆ.

ಅಲಂಕಾರಕ್ಕೆ ಬಳಸುವ ಪ್ಲಾಸ್ಟಿಕ್ ವಸ್ತುಗಳೂ ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತವೆ. ಆದ್ದರಿಂದ ಪ್ರತಿಯೊಬ್ಬರು ಕೂಡಾ ಸಾಧ್ಯವಾದಷ್ಟು ಈ ಆಚರಣೆಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು .ನಮ್ಮ ಪರಾಂಪರಾನುಗತವಾಗಿ ಬಂದ ದೀಪಾವಳಿ ಹಬ್ಬದ ಆಚರಣೆಯಲ್ಲಿ ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಕಾಲವೀಗ ಬಂದಿದೆ. ದೀಪಾವಳಿ ಹಬ್ಬ ಆಚರಣೆಯ ಸಂಭ್ರಮದಲ್ಲಿ ನಮ್ಮ ಪರಿಸರವನ್ನು ನಾವು ಮರೆಯಕೂಡದು.

ಏಕೆಂದರೆ ಅದು ನಮ್ಮದೇ ಪರಿಸರವಾಗಿದ್ದು ಅದರ ಜೊತೆಗೆ ನಾವಿರುತ್ತೇವೆ ಎಂಬುದನ್ನು ಮರೆಯಬಾರದು. ಹಬ್ಬದ ಆಚರಣೆ ಹಸಿರುಮಯವಾಗಿರಲಿ.ಪರಿಸರ ಸ್ನೇಹಿಯಾಗಿ ಮಾರ್ಪಡಲಿ.ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆ ಕಟ್ಟಲು ಇಲ್ಲಿವೆ ಕೆಲವು ಸರಳ ವಿಧಾನಗಳು.

 • ಹಸಿರು ಪಟಾಕಿ
  ವಿವಿಧ ರೀತಿಯ ಪಟಾಕಿಗಳು ಪರಿಸರಕ್ಕೆ ತೀರಾ ಹಾನಿಯನ್ನುಂಟು ಮಾಡುತ್ತವೆ. ಇದರ ಹೊಗೆ ಮತ್ತು ರಾಸಾಯನಿಕ ವಸ್ತು ಮತ್ತು ದಪ್ಪ ಕಾಗದಗಳು ಪರಿಸರಕ್ಕೆ ಒಳ್ಳೆಯದಲ್ಲ. ಆದ್ದರಿಂದ ಪಟಾಕಿಯನ್ನು ಬಳಸದಿರುವುದು ಒಳ್ಳೆಯದು. ಇದರ ಬದಲು ದೀಪಗಳನ್ನು ಬೆಳಗಿಸಿ. ಪಟಾಕಿ ಹೊಡೆಯಲೇ ಬೇಕಿದ್ದರೆ ಪುನರ್ ಬಳಕೆಗೆ ಯೋಗ್ಯವಾದ ಪೇಪರ್ ಗಳಿಂದ ಮಾಡಿದ ಪರಿಸರ ಸ್ನೇಹಿ ಪಟಾಕಿಗಳನ್ನು ಸಿಡಿಸಿ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪಟಾಕಿ ಖರೀದಿಸಿ.

ಪರಿಸರ ಮಾಲಿನ್ಯದ ಚಿಂತೆಯಿಲ್ಲದೇ ಪರಿಸರಕ್ಕೆ ಅಡ್ಡಿಯಾಗದ ಪರಿಸರ ಸ್ನೇಹಿ ಪಟಾಕಿಗಳನ್ನು ಪರಿಚಯಿಸಲಾಗುತ್ತಿದೆ. ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಈ ಹಸಿರು ಪಟಾಕಿಯಿಂದ ಶೇ.೩೦ರಷ್ಟು ಮಾಲಿನ್ಯ ಕಡಿಮೆಯಾಗಲಿದೆ.ಹಸಿರು ಪಟಾಕಿಗಳನ್ನು ವೈಜ್ಞಾನಿಕ ಹಾಗೂ ಕೈಗಾರಿಕ ಸಂಶೋಧನ ಕೌನ್ಸಿಲ್ ( ಸಿ ಎಸ್ ಐಆರ್ )ತಯಾರಿಸಿದೆ. ಸಾಮಾನ್ಯ ಪಟಾಕಿಗಳಿಗಿಂತ ಹಸಿರು ಪಟಾಕಿಗಳಲ್ಲಿ ಕಡಿಮೆ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಹೀಗಾಗಿ ಇದರಿಂದ ಪರಿಸರಕ್ಕೆ ಹೆಚ್ಚು ಹಾನಿ ಆಗುವುದಿಲ್ಲ. ಜೊತೆಗೆ ಸಾಮಾನ್ಯ ಪಟಾಕಿಗಳಿಂತ ಈ ಹಸಿರು ಪಟಾಕಿಗಳ ಬೆಲೆಯೂ ಕಡಿಮೆ ಇದೆ.

೨೦೧೮ರಲ್ಲಿ ದೀಪಾವಳಿ ಹಬ್ಬಕ್ಕೂ ಮುಂಚೆಯೇ ಸುಪ್ರೀಂ ಕೋರ್ಟ್ ಪರಿಸರ ಮಾಲಿನ್ಯ ಉಂಟುಮಾಡುವ ಪಟಾಕಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ನಿಷೇಧ ಹೇರಿತ್ತು. ಈ ಹಿನ್ನೆಲೆಯಲ್ಲಿ ಈಗ ಪರಿಸರ ಸ್ನೇಹಿ ಹಸಿರು ಪಟಾಗಿ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿದೆ.

 • ಪ್ರಕೃತಿ ಸಹಜ ರಂಗೋಲಿ

 • ಸುಂದರವಾದ ರಂಗೋಲಿಗಳು ಹಬ್ಬದ ಕಳೆಯನ್ನು ಹೆಚ್ಚಿಸುತ್ತವೆ. ಆದರೆ ರಂಗೋಲಿಗೆ ಬಳಸುವ ವಿಷಪೂರಿತ ಕೃತಕ ಬಣ್ಣದ ಪುಡಿಗಳನ್ನು ಕೈ ಬಿಡಿ . ಸಾಧ್ಯವಾದಷ್ಟು ನೈಸರ್ಗಿಕ ವಸ್ತುಗಳಿಂದ ಮಾಡಿದ ರಂಗೋಲಿ ಪುಡಿಗಳನ್ನು ಬಳಸಿ . ಅಂದರೆ ಹಳದಿ ಬಣ್ಣಕ್ಕೆ ಅರಶಿಣಪುಡಿ, ಬಿಳಿ ಬಣ್ಣಕ್ಕೆ ಅಕ್ಕಿ ಹಿಟ್ಟು, ಕಂದು ಬಣ್ಣಕ್ಕೆ ಕಾಫಿ ಪುಡಿ ಮತ್ತು ಕೆಂಪು ಬಣ್ಣಕ್ಕೆ ಕುಂಕುಮವನ್ನು ಬಳಸಬಹುದು. ವರ್ಣರಂಜಿತ ಮತ್ತು ನೈಸರ್ಗಿಕವಾಗಿ ಕಾಣಲು ಘಮಘಮಿಸುವ ಹೂವಿನ ದಳಗಳು ಮತ್ತು ಹಚ್ಚ ಹಸಿರು ಎಲೆಗಳನ್ನು ಬಳಸಿದರೆ ರಂಗೋಲಿ ಕಳೆ ಕಟ್ಟುತ್ತದೆ. ಇಂಥ ರಂಗೋಲಿಗಳನ್ನು ನೋಡುವದೇ ಕಣ್ಣಿಗೆ ಹಬ್ಬ. ಹಬ್ಬ ಮುಗಿದ ಮೇಲೆ ಇವುಗಳನ್ನು ಸುಲಭವಾಗಿ ತೆಗೆದು ಗೊಬ್ಬರಗುಂಡಿಗೆ ಹಾಕಬಹುದು
 • ಪ್ಲಾಸ್ಟಿಕ್ ಬೇಡವೇ ಬೇಡ
  ದೀಪಾವಳಿಗೆ ಬಹಳ ಜನ ಪ್ಲಾಸ್ಟಿಕ್‌ನಿಂದ ಮಾಡಿದ ಅಲಂಕಾರಿಕ ವಸ್ತುಗಳನ್ನು ಬಳಸುತ್ತಾರೆ. ಪ್ಲಾಸ್ಟಿಕ್‌ನ ಹೂವು, ತೋರಣ, ಪ್ಲಾಸ್ಟಿಕ್‌ನ ಕಾಣಿಕೆಗಳು ಇತ್ಯಾದಿ ಪ್ಲಾಸ್ಟಿಕ್‌ಮಯವಾಗಿರುತ್ತವೆ. ಆದರೆ ಈ ಪ್ಲಾಸ್ಟಿಕ್‌ಗಳು ಮಣ್ಣಿನಲ್ಲಿ ಕರಗುವುದಿಲ್ಲ. ಪರಿಸರಕ್ಕೆ ಹಾನಿಯುಂಟು ಮಾಡುವ ಇಂಥ ಕೃತಕ ಅಲಂಕಾರಿಕ ವಸ್ತುಗಳಿಂದ ದೂರವಿರಿ. ಹೂವು, ಎಲೆ, ಮಣ್ಣಿನ ಕಲಾಕೃತಿಗಳು ಮುಂತಾದ ನೈಸರ್ಗಿಕ ಅಲಂಕಾರಿಕ ವಸ್ತುಗಳನ್ನು ಬಳಸಿ. ಕೆಲವರು ಅತಿಥಿಗಳಿಗೆ ಬಳಸಿ ಬೀಸಾಡುವ ಪ್ಲಾಸ್ಟಿಕ್ ತಟ್ಟೆ ಗಳಲ್ಲಿ ಊಟ ಬಡಿಸುತ್ತಾರೆ.ಗ್ಲಾಸುಗಳಲ್ಲಿ ನೀರು ಪಾನೀಯ ಕೊಡುತ್ತಾರೆ. ಇದಕ್ಕಿಂತ ಬಾಳೆಎಲೆ,ಅಡಿಕೆ ತಟ್ಟೆ ಅಥವಾ ಮುತ್ತುಗದ ಎಲೆಯ ಪತ್ರೋಳಿ ದೊನ್ನೆಗಳಲ್ಲಿ ಊಟ ಬಡಿಸಿದರೆ ಉತ್ತಮ.
 • ಬೆಳಗಲಿ ಮಣ್ಣಿನ ಹಣತೆ

 • ಹಬ್ಬಕ್ಕೆ ಬಣ್ಣ ಬಣ್ಣದ ಮೇಣದಬತ್ತಿಗಳನ್ನು ಬೆಳಗಿಸುವುದಕ್ಕಿಂತ ಮಣ್ಣಿನ ಹಣತೆಯಲ್ಲಿ ಎಣ್ಣೆ ಹಾಕಿ ದೀಪ ಬೆಳಗಿಸಿ. ಮಣ್ಣಿನ ಹಣತೆಗಳನ್ನು ಮತ್ತೆ ಬಳಸಬಹುದು. ಇದನ್ನು ಪರಿಸರ ಸ್ನೇಹಿ ವಸ್ತುಗಳಿಂದಲೇ ತಯಾರಿಸಲಾಗುತ್ತದೆ. ನಮ್ಮ ಗ್ರಾಮೀಣ ಕಲಾಕಾರರಿಗೂ ಉತ್ತೇಜನ ನೀಡಿದಂತಾಗುತ್ತದೆ.ಇದೇ ರೀತಿ ತೀಕ್ಷ್ಣವಾದ ರಾಸಾಯನಿಕ ಬಣ್ಣಗಳನ್ನು ಹಚ್ಚಿದ ಹಣತೆಗಳನ್ನು ಖರೀದಿ ಮಾಡಬೇಡಿ. ಬಣ್ಣ ಬಣ್ಣದ ಮೇಣದ ಬತ್ತಿಗಳು ವಿಷಕಾರಿ ವಸ್ತುಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಇವುಗಳನ್ನೂ ಬಳಸದಿರಿ. ಮನೆ ಮುಂದೆ ತೂಗು ಹಾಕುವ ಆಕಾಶಬುಟ್ಟಿಯೂ ಸಹ ಪರಿಸರ ಸ್ನೇಹಿಯಾಗಿರಲಿ. ಪುನರ್ ಬಳಕೆಗೆ ಯೋಗ್ಯವಾದ ಕಾಗದದಿಂದ ತಯಾರಿಸಿದ ಆಕಾಶಬುಟ್ಟಿಗಳನ್ನೇ ಮನೆಯ ಮುಂದೆ ತೂಗು ಹಾಕಿ ಹಬ್ಬದ ಸಂಭ್ರಮ ಹೆಚ್ಚಿಸಿ.

ವಿಳಾಸ:ವಿಜಯೇಂದ್ರ ಕುಲಕರ್ಣಿ.ಕಲಬುರಗಿ ೯೭೪೧೩೪೦೫೨೫.
ನಂ ೬೧, ಜನತಾಗೃಹ ನಿರ್ಮಾಣಸಂಘ ಲೇಔಟ್,
ಸರ್ಕಾರಿ ಪ್ರಾಥಮಿಕ ಶಾಲೆ ಹತ್ತಿರ,ಕರುಣೇಶ್ವರ ನಗರ,
ಹೊಸ ಜೇವರಗಿ ರಸ್ತೆ,ಕಲಬುರಗಿ. ೫೮೫೧೦೨