
ಸಿಂಧನೂರು,ಸೆ.೧೦ – ತಾಲೂಕಿನ ದುಗ್ಗಮ್ಮನಗುಂಡ ಗ್ರಾಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಚಿಕ್ಕಯ್ಯ ಪಂಡಿತ್ ಕಬ್ ಘಟಕ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸಿಂಧನೂರು ವತಿಯಿಂದ ಪರಿಸರ ಸ್ನೇಹಿ ಗಣೇಶ ತಯಾರಿ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಪ್ಲಾಸ್ಟಿಕ್ ಗಣಪತಿಗಳಿಂದ ಜಲಮಾಲಿನ್ಯ ಉಂಟಾಗುತ್ತದೆ. ನೀರಿನ ಮೂಲಗಳು ಅಶುದ್ಧವಾಗುತ್ತದೆ. ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವ ಕರ್ತವ್ಯ ನಮ್ಮ ಮೇಲಿದೆ. ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶನನ್ನು ತಯಾರಿಸಿ ಭಕ್ತಿಭಾವದಿಂದ ಗಣೇಶೋತ್ಸವ ಆಚರಿಸಬೇಕೆಂದು ಶಾಲಾ ಮುಖ್ಯಗುರುಗಳಾದ ಶಂಕರ ದೇವರು ಹಿರೇಮಠ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ರಾಸಾಯನಿಕಗಳನ್ನು ಬಳಸಿದ, ಬಣ್ಣಗಳಿಂದ ತಯಾರಿಸಿದ ಪಿಓಪಿ ಹಾಗೂ ಪ್ಲಾಸ್ಟಿಕ್ ಗಣಪತಿಗಳನ್ನು ಬಳಸುವುದರಿಂದ ಪರಿಸರ ಮಾಲಿನ್ಯವಾಗುತ್ತದೆ. ಹಳ್ಳ ಹಾಗೂ ಕೆರೆಗಳಲ್ಲಿ ಗಣೇಶ ವಿಸರ್ಜನೆ ನಂತರ ಪಿಓಪಿ ಗಣಪತಿಗಳು ನೀರಿನಲ್ಲಿ ಬೇಗ ಕರಗುವುದಿಲ್ಲ ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ.ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ನಾವೆಲ್ಲರೂ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿ ಗಣಪತಿ ಮೂರ್ತಿಯನ್ನು ಮಾಡುವ ಕುರಿತು ತರಬೇತಿ ನೀಡಲಾಯಿತು.
ಸಹಶಿಕ್ಷಕರಾದ ವಿರೂಪಾಕ್ಷಪ್ಪ ಫಕೀರಪೂರ ವಿರುಪಾಕ್ಷಪ್ಪ ವಿದ್ಯಾರ್ಥಿಗಳಿಗೆ ಮಾಗ೯ದಶ೯ನ ಮಾಡಿದರು.ನಾವೆಲ್ಲರೂ ನಮ್ಮ ಮನೆಗಳಲ್ಲಿ ಪರಿಸರಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಿ ಗಣೇಶ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು.
ಕಬ್ ವಿದ್ಯಾರ್ಥಿಗಳು ಹಾಗೂ ಬುಲ್ ಬುಲ್ ವಿದ್ಯಾರ್ಥಿಗಳು ಪರಿಸರಸ್ನೇಹಿ ಗಣೇಶನನ್ನು ತಯಾರಿಸಿ ಸಂಭ್ರಮಿಸಿದರು. ಶಾಲಾ ಅತಿಥಿ ಶಿಕ್ಷಕರಾದ ಪ್ರದೀಪ್ ಕುಮಾರ್ ಅವರು ಉಪಸ್ಥಿತರಿದ್ದರು.