ಪರಿಸರ ಸರಂಕ್ಷಣೆಗೆ ಸಿಇಒ ಕರೆ

ಕೋಲಾರ,ಜೂ,೮- ಪರಿಸರ ರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆ ಅತ್ಯಂತ ಸಂಕಷ್ಟಕ್ಕೆ ಸಿಲುಕಲಿದೆ ಎಂಬ ಸತ್ಯ ಅರಿತು ಗಿಡ ಮರ ಬೆಳೆಸಲು ಮುಂದಾಗಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ.ಮುನಿಯಪ್ಪ ತಿಳಿಸಿದರು.
ನಗರದ ತಾಪಂ ಮುಂಭಾಗ ಪರಿಸರ ದಿನದ ಅಂಗವಾಗಿ ಗಿಡನೆಟ್ಟು ಮಾತನಾಡಿದ ಅವರು, ಮಕ್ಕಳಲ್ಲಿ ಪರಿಸರ ಜಾಗೃತಿಗಾಗಿ ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ, ಮುಂದಿನ ಭ ವಿಷ್ಯವಾದ ಮಕ್ಕಳಿಗೆ ಅರಿವು ಮೂಡಿಸಿದರೆ ಹೆಚ್ಚು ಪರಿಣಾಮಕಾರಿ ಎಂದರು.
ಇಡೀ ವಿಶ್ವವೇ ಇಂದು ಪರಿಸರ ಮಾಲಿನ್ಯದಿಂದ ತತ್ತರಿಸಿ ಹೋಗಿದೆ, ನಾವು ಈಗಲೇ ಎಚ್ಚರವಹಿಸಿ ನಮ್ಮ ನಿಸರ್ಗವನ್ನು ಉಳಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಪಾರ ಬೆಲೆ ತೆರಬೇಕಾದೀತು ಎಂದರು.
ಮನುಷ್ಯನ ಅತಿಯಾದ ಆಸೆಯಿಂದ ಅರಣ್ಯ ನಾಶದ ಜತೆಗೆ ಪ್ಲಾಸ್ಟಿಕ್ ಬಳಕೆ ಭೂಮಿಯನ್ನು ಕಲುಷಿತಗೊಳಿಸುತ್ತಿದೆ, ಮುಂದಿನ ಪೀಳಿಗೆ ಬದುಕಿಗೆ ಇದು ಹಾನಿಕಾರಕವಾಗಿದ್ದು, ಅರಣ್ಯ ಉಳಿಸೋಣ, ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸೋಣ ಎಂದು ಕಿವಿಮಾತು ಹೇಳಿದರು.
ಗಿಡಮರ ಬೆಳೆಸುವ ಸಂಕಲ್ಪ ಪ್ರತಿಯೊಬ್ಬರದಾಗಲಿ ಎಂದ ಅವರು, ಪ್ರಕೃತಿಯ ಜತೆ ನಾವು ಹೊಂದಿಕೊಂಡು ಹೋಗಬೇಕೆ ಹೊರತೂ ಅದರ ವಿರುದ್ದ ಹೋದರೆ ಅದರಿಂದಾಗುವ ಹಾನಿಯನ್ನು ಎದುರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಕಾರ್ಯಾಧ್ಯಕ್ಷ ಹಾಗೂ ತಾಪಂ ಅಧೀಕ್ಷಕ ಎನ್.ಶ್ರೀನಿವಾಸ ರೆಡ್ಡಿ, ಸಹಾಯಕ ನಿರ್ದೇಶಕರು (ನರೇಗಾ) ಅಶೋಕ್ ಕುಮಾರ್, ಕಾರ್ಯದರ್ಶಿ ಕರಿಬಸಪ್ಪ,ದ್ವಿ.ದ. ಸಹಾಯಕರಾದ ಪ್ರತ್ಯುಷಾ ಮತ್ತಿತರರಿದ್ದರು.