ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ

ಕಲಬುರಗಿ: ಜೂ.5 : ಪರಿಸರ ಸಮತೋಲನವಾಗಿಯೇ ಹುಟ್ಟಿದೆ. ಆದರೆ ಅದರ ಮೇಲೆ ಮಾನವ ತನ್ನ ದಬ್ಬಾಳಿಕೆಯನ್ನು ಮಾಡಿ, ತನಗಿಷ್ಟದಂತೆ ಬದಲಾಯಿಸಬೇಕೆಂಬ ಪ್ರಯತ್ನಕ್ಕೆ ಕೈಹಾಕಿರುವುದರ ಪರಿಣಾಮವಾಗಿ ಪರಿಸರದಲ್ಲಿ ಏರು-ಪೇರುಗಳಾಗಿ ನೈಸರ್ಗಿಕ ಅವಘಡಗಳಾಗುತ್ತಿವೆ. ಆದ್ದರಿಂದ ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡು ಪರಿಸರ ಮೂಲ ಸ್ಥಿತಿಯನ್ನು ಕಾಪಾಡುವುದು ಪ್ರಸ್ತುತ ಅಗತ್ಯವಾಗಿದೆಯೆಂದು ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ನೀಲಕಂಠಯ್ಯ ಹಿರೇಮಠ ಹೇಳಿದರು.
ಆಳಂದ ತಾಲೂಕಿನ ಎಲೆ ನಾವದಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ನಾಗಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮದ ಸಹಯೋಗದೊಂದಿಗೆ ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಇವುಗಳ ವತಿಯಿಂದ ‘ವಿಶ್ವ ಪರಿಸರ ದಿನಾಚರಣೆ’ ಪ್ರಯುಕ್ತ ಶನಿವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಗ್ರಾಮದ ಮುಖಂಡ ಶರಣು ಪವಾಡಶೆಟ್ಟಿ ಮಾತನಾಡಿ, ಪ್ರತಿಯೊಂದು ಜೀವಿ ಜನಿಸಿ, ಬೆಳವಣಿಗೆ ಹೊಂದಲು ಪರಿಸರ ತುಂಬಾ ಅಗತ್ಯವಾಗಿದೆ. ನಮ್ಮೆಲ್ಲರ ಆವಾಸ ಸ್ಥಾನವಾದ ಪರಿಸರವಿಂದು ಅನೇಕ ಕಾರಣಗಳಿಂದ ಹಾಳಾಗುತ್ತಿದ್ದು, ಅದರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿ, ಅದನ್ನು ಆಚರಣೆಯಲ್ಲಿ ತಂದರೆ ಮಾತ್ರ ಪರಿಸರದ ಸಂರಕ್ಷಣೆ ಸಾಧ್ಯವಾಗುತ್ತದೆಯೆಂದು ಮಾಮಿಕವಾಗಿ ನುಡಿದರು.
ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಬಸಯ್ಯಸ್ವಾಮಿ ಹೊದಲೂರ, ಗ್ರಾ.ಪಂ ಉಪಾಧ್ಯಕ್ಷ ಅನಂತರೆಡ್ಡಿ, ಸದಸ್ಯ ಮಲ್ಲಿನಾಥ ಕೋಳೆ, ಗ್ರಾಮಸ್ಥರಾದ ನಾಗರಾಜ ಕುಲಕರ್ಣಿ, ಸಿದ್ದರಾಮ ಕುಲಕರ್ಣಿ,ಶರಣು ಕುಲಕರ್ಣಿ, ಶಾಂತಕುಮಾರ ಪೂಜಾರಿ, ರವಿ ಪೂಜಾರಿ, ಅಶೋಕ ಮೂಲಗೆ, ಕರಬಸಪ್ಪ ಮಡಿವಾಳ,ಸುದರ್ಶನರೆಡ್ಡಿ, ಕುಮಾರಸ್ವಾಮಿ ಸೇರಿದಂತೆ ಮತ್ತಿತರರಿದ್ದರು.