ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ : ಶಿವಬಸವ ಸ್ವಾಮೀಜಿ

ಅಥಣಿ : ಸೆ.3:ಪರಿಸರವನ್ನು ಸಂರಕ್ಷಣೆ ಮಾಡುವುದು, ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರತಿ ವ್ಯಕ್ತಿಯ ಜನ್ಮದಿನ ಮತ್ತು ಶುಭ ಸಂದರ್ಭದಲ್ಲಿ ಗಿಡಮರಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಜೊತೆಗೆ ನಮ್ಮೆಲ್ಲರಿಗೆ ಆಮ್ಲಜನಕ ಒದಗಿಸುವ ಮಹತ್ವದ ಕಾಯಕ ಮಾಡಬೇಕು ಎಂದು ಗಚ್ಚಿನ ಮಠದ ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಅವರು ಶ್ರೀ ಮರುಳ ಶಂಕರ ದೇವರು ಫೌಂಡೇಶನ್ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಮೌನ ಯೋಗಿ ಮರುಳಶಂಕರ ದೇವರ ಸ್ಮರಣೋತ್ಸವದ ಅಂಗವಾಗಿ ಪಟ್ಟಣದ ಸಾಯಿನಗರದ ಬಸವೇಶ್ವರ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾಯಿನಗರ ನಿವಾಸಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸವೇಶ್ವರ ಉದ್ಯಾನವನವನ್ನು ಸುಂದರವಾಗಿ ಅಭಿವೃದ್ಧಿಪಡಿಸಿ ಮರುಳಶಂಕರ ದೇವರುಗಳ ಸ್ಮರಣೋತ್ಸವದ ಅಂಗವಾಗಿ ಸಸಿಗಳನ್ನು ನೆಡುವ ಮೂಲಕ ಎಲ್ಲರಿಗೂ ಉತ್ತಮ ಪರಿಸರ ಮತ್ತು ಶುದ್ಧಗಾಳಿ ಜೊತೆಗೆ ವಾಯುವಿಹಾರಕ್ಕೆ ವ್ಯವಸ್ಥೆ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡುವುದರ ಜೊತೆಗೆ ಪ್ರತಿನಿತ್ಯ ಶುದ್ಧ ಆಹಾರ, ನಿತ್ಯ ವಿಹಾರ ಮಾಡುವ ಮೂಲಕ ಆರೋಗ್ಯ ಸಂಪತ್ತನ್ನು ಕಾಯ್ದುಕೊಳ್ಳಬೇಕು. ಆರೋಗ್ಯವನ್ನು ಕಳೆದುಕೊಂಡು ಎಷ್ಟೇ ಸಂಪತ್ತು ಗಳಿಸಿದರೂ ಅದು ಕಸದ ಸಮಾನ. ಎಲ್ಲ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಶ್ರೇಷ್ಠವಾಗಿದೆ. ಆರೋಗ್ಯವಂತ ಸಮಾಜವನ್ನು ರೂಪಿಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಶ್ರೀ ಮರುಳ ಶಂಕರ ಫೌಂಡೇಶನ್ ಅಧ್ಯಕ್ಷ ಚನ್ನಬಸಯ್ಯ ಇಟ್ನಾಳಮಠ ಮಾತನಾಡಿ ಮೌನಯೋಗಿ ಮರುಳ ಶಂಕರ ದೇವರು ಅವರ ನಿಸ್ವಾರ್ಥ ಸೇವೆ ಮತ್ತು ಸರಳ ಬದುಕು ನಮ್ಮೆಲ್ಲರಿಗೆ ಮಾದರಿಯಾಗಿದೆ. ಶಿವಯೋಗಿಗಳ ಕೃಪಾಶೀರ್ವಾದದಿಂದ ಮರುಜನ್ಮ ಪಡೆದ ಶಿವಯೋಗಿಗಳ ಸೇವೆಯ ಮೂಲಕ ಶಿವಯೋಗ ಪಡೆದುಕೊಂಡು, ಒಬ್ಬ ಯೋಗಪಟು ಗಳಾಗಿ, ಸಂಗೀತಗಾರರಾಗಿ, ಪ್ರಸಿದ್ಧ ಜಲ ಸಂಶೋಧಕರಾಗಿ ಭಕ್ತರ ಹೃದಯದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ಅವರ ಸ್ಮರಣೆಯ ನೆಪದಲ್ಲಿ ಬಸವೇಶ್ವರ ಉದ್ಯಾನವನ ಹಸಿರು ತಾಣವಾಗಿ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರಿಗೂ ಖುಷಿ ತಂದಿದೆ. ಮುಂದಿನ ದಿನಮಾನಗಳಲ್ಲಿ ಉದ್ಯಾನವನದಲ್ಲಿ ಪ್ರವಚನ, ಚಿಂತನ ಗೋಷ್ಠಿಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶುಭ ಹಾರೈಸಿದರು.
ಈ ವೇಳೆ ಪುರಸಭಾ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಪುರಸಭಾ ಸದಸ್ಯರಾದ ರಾವಸಾಹೇಬ ಐಹೊಳೆ, ರಮೇಶ ಗಾಡಿವಡ್ಡರ, ಅಭಿಯಂತರ ರಾಜಶೇಖರ ಟೋಪಗಿ ಮತ್ತು ಕರವೇ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿದರು.
ನ್ಯಾಯವಾದಿ ಶಂಕರ ಮಟ್ಟೆಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ. ಆರ್ ಬಡಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ವೇಳೆ ನೂತನ ಪುರಸಭೆ ಸದಸ್ಯರಿಗೆ ಮತ್ತು ಬಸವೇಶ್ವರ ಉದ್ಯಾನವನದಲ್ಲಿ ವನಮಹೋತ್ಸವ ಆಚರಣೆಗೆ ಸಹಕಾರ ನೀಡಿದ ಪ್ರಾದೇಶಿಕ ವಲಯ ಸಹಾಯಕ ಅರಣ್ಯ ಅಧಿಕಾರಿ ಎಸ್ ಎಂ ಮುಂಜೆ ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ಅಧಿಕಾರಿ ರಾಜೇಶ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ನಿವೃತ್ತ ಗೊಂಡ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ರಾಮಣ್ಣ ಧರಿಗೌಡರ ಅವರನ್ನು ಸನ್ಮಾನಿಸಲಾಯಿತು. ನಂತರ ಬಸವೇಶ್ವರ ಉದ್ಯಾನವನದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಮೌನಯೋಗಿ ಮರುಳಶಂಕರ ದೇವರ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ 150 ಕ್ಕೂ ಅಧಿಕ ವಿವಿಧ ಬಗೆಯ ಗಿಡಗಳನ್ನು ನೆಡಲಾಯಿತು. ರಾಜಶೇಖರ ಟೋಪಗಿ ಸ್ವಾಗತಿಸಿದರು. ಎಂ ಕೆ ಕಕಮರಿ ನಿರೂಪಿಸಿದರು. ಎಸ್ ಎಂ ಶರಣ ವಂದಿಸಿದರು.