ಪರಿಸರ ಸಂರಕ್ಷಣೆ ನಿರ್ಲಕ್ಷ್ಯ ಸದಾನಂದ ಆರೋಪ

ಕೋಲಾರ ನ.೧೪-ಮರವಿದ್ದರೆ ಬದುಕು, ಮರವಿದ್ದರೆ ಆಯುಷ್ಯ. ಆದರೆ ಅಭಿವೃದ್ಧಿಯ ಮಾತಿನಲ್ಲಿ ಪರಿಸರ ಸಂರಕ್ಷಣೆಯನ್ನು ಮರೆತಿದ್ದೇವೆ. ಅಷ್ಟೇ ಅಲ್ಲ ಉಳಿದಿರುವ ಅಷ್ಟಿಷ್ಟು ಮರಗಳನ್ನು ಕೂಡ ನೆಲಸಮ ಮಾಡಲಾಗುತ್ತಿದೆ. ಅಭಿವೃದ್ಧಿ ಪರಿಸರಕ್ಕೆ ಪೂರಕವಾಗಿದ್ದರೆ ಒಳಿತು, ಇಲ್ಲದಿದ್ದರೆ ಶಾಪ ಅನ್ನುವ ಮಾತನ್ನು ಸರಿಯಾಗಿ ಅರ್ಥಮಾಡಿಕೊಂಡವರೇ ಕಡಿಮೆ. ಕೇವಲ ಪರಿಸರವಾದಿಗಳು ಮಾತ್ರ ಪರಿಸರದ ಬಗ್ಗೆ ಕಾಳಜಿ ತೋರುತ್ತಿದ್ದಾರೆ ಎಂದು ಖಾಸಗಿ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸದಾನಂದ ಬೇಸರ ವ್ಯಕ್ತಪಡಿಸಿದರು.
ಪರಿಸರ ಪ್ರೇಮಿಗಳ ಬಳಗ ಮತ್ತು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಶುಕ್ರವಾರ ಕೋಲಾರ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಖರೀದಿಸುವವರಿಗೆ ಗಿಡ ನೀಡಿ ಪರಿಸರವನ್ನು ಉಳಿಸುವ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಮ್ಲಜನಕದ ಉಪಸ್ಥಿತಿ ಇಲ್ಲದೆ ಜೀವಿಗಳ ಉಳಿವಿಗೆ ಸಾಧ್ಯವಿಲ್ಲ. ನೆಟ್ಟ ಮರಗಳನ್ನು ಸಹ ಅತ್ಯಗತ್ಯ ಏಕೆಂದರೆ ಅವರು ಹಾನಿಕಾರಕ ಅನಿಲಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾರೆ. ಕಾರ್ಬನ್ ಮೊನೊ ಆಕ್ಸೈಡ್, ಸಲ್ಫರ್ ಡಯಾಕ್ಸೈಡ್ ಮತ್ತು ಇತರ ಹಾನಿಕಾರಕ ಅನಿಲಗಳು ಮತ್ತು ವಾಹನಗಳು ಮತ್ತು ಕೈಗಾರಿಕೆಗಳು ಹೊರಸೂಸುವ ಹೊಗೆಯಿಂದ ಉಂಟಾಗುವ ಬೆಳೆಯುತ್ತಿರುವ ಮಾಲಿನ್ಯವು ಮರಗಳು ಇರುವ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ನಿಯಂತ್ರಿಸಲ್ಪಡುತ್ತದೆ ಮತ್ತು ಶುದ್ಧೀಕರಿಸಲ್ಪಡುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತ್ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ ಮಾನವನು ನಿರಂತರವಾಗಿ ಪರಿಸರದ ಮೇಲೆ ದಾಳಿ ಮಾಡಿದ ಪರಿಣಾಮ ನಾವು ಮಹಮಾರಿ ಕೋರನಾದಂತಹ ಮಾರಕ ರೋಗಗಳು, ಸುನಾಮಿಯಂತಹ ಪ್ರಕೃತಿ ವೈಪರಿತ್ಯಗಳನ್ನು ಕಾಣುವ ಪರಿಸ್ಥಿತಿ ತಂದುಕೊಂಡಿದ್ದೇವೆ. ಪರಿಸರದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಪ್ರತಿಯೊಬ್ಬರೂ ಗಿಡ ನಡೆವ ಹವ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಿಸರವನ್ನು ಉಳಿಸಿ, ಬೆಳೆಸಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ನೆಮ್ಮದಿಯಿಂದ ಬದುಕಲು ಸಾಧ್ಯವೆಂದರು.
ಖಾಸಗಿ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಜಗನ್ನಾಥ್, ನಿವೃತ್ತ ಅರಣ್ಯ ಅಧಿಕಾರಿ ಪುರುಷೋತ್ತಮ್, ಇಂಜಿನಿಯರ್ ಮಂಜುನಾಥ್, ಕಂಟ್ರಾಕ್ಟರ್ ಕೃಷ್ಣಪ್ಪ, ಗಲ್‌ಪೇಟೆ ಕೆ.ಸಿ.ಸಂತೋಷ್, ಎ.ಪಿ.ಎಂ.ಸಿ. ಪುಟ್ಟರಾಜು, ವಿ.ಕೆ.ರಾಜೇಶ್, ಮಾನವ ಹಕ್ಕುಗಳ ಸಂಘದ ಜಿಲ್ಲಾಧ್ಯಕ್ಷ ಕಾಶಿ, ಸ್ಕೌಟ್ಸ್ ಅಂಡ್ ಗೈಡ್ಸ್‌ನ ಪದಾಧಿಕಾರಿಗಳಾದ ಸುರೇಶ್, ಗೋಪಾಲರೆಡ್ಡಿ, ಬಾಬು, ವಿಶ್ವನಾಥ್, ಉಮಾದೇವಿ, ಹರ್ಷ ಮೆಡಿಕಲ್ ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್‌ನ ವೆಂಕಟಕೃಷ್ಣ, ನಾರಾಯಣವಿಭೂ ಮತ್ತಿತರರು ಇದ್ದರು.