
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಸೆ.೧೨;ಪರಿಸರ ಇದ್ದರೆ ನಾವು. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಮುಖ್ಯ ಜವಾಬ್ದಾರಿಯಾಗಿದೆ ಎಂದು ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಗಾಡಿಕೊಪ್ಪದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಸ್ಯ ಶ್ಯಾಮಲ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇತ್ತೀಚೆಗೆ ಹೆಚ್ಚು ಅರಣ್ಯ ನಾಶವಾಗುತ್ತಿರುದನ್ನು ಕಾಣುತ್ತಿದ್ದೇವೆ. ಅರಣ್ಯ ನಾಶವಾದಷ್ಟು ಪರಿಸರದ ಮೇಲೆ ಹೆಚ್ಚಿನ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಗಿಡ-ಮರಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕಿದೆ. ಇದು ನಮ್ಮೆಲ್ಲರ ಜವಾಬ್ದಾರಿ ಮತ್ತು ಇಂದಿನ ತುರ್ತಾಗಿದೆ.ಪರಿಸರ ಸಂರಕ್ಷಣೆ ವಿಷಯದಲ್ಲಿ ವಿದ್ಯಾರ್ಥಿಗಳಾದ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಪ್ರತಿ ಮಕ್ಕಳು ತಮ್ಮ ಮನೆಗಳು ಮತ್ತು ಶಾಲೆಗಳಲ್ಲಿ ಒಂದಾದರೂ ಗಿಡ ನೆಟ್ಟು ಪೋಷಿಸಬೇಕೆಂದು ಕರೆ ನೀಡಿದರು.ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಶಾಲಾ ಮಕ್ಕಳ ಹಾಜರಾತಿ ಹಾಗೂ ಸ್ಥಳಾವಕಾಶ ಆಧರಿಸಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ 18718 ಮತ್ತು ಪ್ರೌಢಶಾಲೆ ಮಕ್ಕಳಿಗೆ 5566 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 24284 ಸಸಿಗಳನ್ನು ಆಯ್ದ ಶಾಲೆಗಳಲ್ಲಿ ನೆಡಲಾಗುವುದು. ಮಕ್ಕಳು ಪರಿಸರದ ಕುರಿತು ಹೆಚ್ಚು ಜಾಗೃತರಾಗಬೇಕು. ಗಿಡಗಳನ್ನು ನೆಟ್ಟ ನಂತರ ಒಂದು ಗಿಡಕ್ಕೆ ವಾರಕ್ಕೆ 10 ಲೀ ನೀರನ್ನು ಹಾಕಬೇಕು. ಗಿಡಗಳನ್ನು ನೆಟ್ಟ ನಂತರ ಉಸ್ತುವಾರಿಗಾಗಿ ಮಕ್ಕಳಿಗೆ ಗಿಡಗಳನ್ನು ಹಂಚಿಕೆ ಮಾಡಲಾಗುವುದು. ಸತತ 3 ವರ್ಷಗಳ ಕಾಲ ಮಕ್ಕಳು ಗಿಡಗಳಿಗೆ ನೀರೆರೆದು ಪೋಷಿಸಬೇಕು. ಚೆನ್ನಾಗಿ ಗಿಡ ಬೆಳೆಸಿದ ಮಕ್ಕಳಿಗೆ ಶಾಲೆಯಲ್ಲಿ ಬಹುಮಾನ ನೀಡಲಾಗುವುದು ಎಂದರು.