ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

ದಾವಣಗೆರೆ.ಜೂ.6: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಒಂದು ಮರವನ್ನು ಕಡಿಯುವುದಕ್ಕೆ ಮುಂಚೆ ನಾಲ್ಕು ಮರವನ್ನು ಬೆಳೆಸುವುದು ನಮ್ಮ ಕರ್ತವ್ಯವಾಗಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ತಾಲೂಕಿನ ಆನಗೋಡು ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು, ಗ್ರಾಮಸ್ಥರು, ಗ್ರಾಪಂ ಅಧ್ಯಕ್ಷರು, ಸದಸ್ಯರ ಸಮ್ಮುಖದಲ್ಲಿ ಸಸಿ ನೆಟ್ಟು ನೀರೆರೆಯುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.ನಾವು ವಾಸಿಸುತ್ತಿರುವ ಸುತ್ತಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಇದು ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಸ್ವಚ್ಛವಾಗಿರಿಸಿಕೊಳ್ಳುವುದು ನಮ್ಮ ಹೊಣೆ. ಆದರೆ ಅದು ನಮ್ಮಿಂದ ಸಾಧ್ಯವಾಗದೆ ಹೋಗುತ್ತಿರುವುದು ಒಂದು ಶೋಚನೀಯ ಸಂಗತಿ ಎಂದರು.ಇAದಿನ ದಿನಗಳಲ್ಲಿ ನಾವು ಎದುರಿಸುತ್ತಿರುವ ಮೂರು ಮುಖ್ಯವಾದ ಪರಿಸರ ಮಾಲಿನ್ಯಗಳೆಂದರೆ ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ. ಇವೆಲ್ಲವುಗಳಿಗೂ ಮುಖ್ಯ ಕಾರಣವೆಂದರೆ ಹೆಚ್ಚಾಗುತ್ತಿರುವ ಜನಸಂಖ್ಯೆ. ಜನರು ಬಳಸುವ ವಾಹನಗಳಿಂದ ಕೆಟ್ಟ ಹೊಗೆ ಹೊರ ಬರುತ್ತದೆ. ಕಾರ್ಖಾನೆಗಳಿಂದ ಹೊರ ಬರುವ ರಾಸಾಯನಿಕ ಹೊಗೆ, ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಮಾನವನ ಇಂದಿನ ದಿನನಿತ್ಯ ಜೀವನ ಪದ್ಧತಿಯಿಂದ ಹಾಗೂ ಹೆಚ್ಚುತ್ತಿರುವ ಕಾರ್ಖಾನೆಗಳಿಂದ ಹೊರ ಬಿಡುವ ಕಸ ಹಾಗೂ ತ್ಯಾಜ್ಯ ನೀರು ಇವುಗಳಿಂದ ವಾತಾವರಣ ಮಾಲಿನ್ಯಗೊಳ್ಳುತ್ತದೆ. ಹೀಗಾಗಿ ಪರಿಸರ ಮಾಲಿನ್ಯ ತಡೆಗಟ್ಟುವ ಜವಾಬ್ದಾರಿ ನಮ್ಮದಾಗಿದೆ. ಮುಂದಿನ ಪೀಳಿಗೆಗೆ ಈ ಪರಿಸರವು ಉಳಿಯಬೇಕಾದರೆ ನಾವೆಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ನಾವು ಈ ಪರಿಸರದ ಶಿಶುಗಳು, ಪರಿಸರವಿಲ್ಲದೆ ನಮ್ಮ ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆ ಇರುವುದಿಲ್ಲ. ಪುರಾಣ ಕಾಲದಿಂದಲ್ಲೂ ರಾಜಕುವರರೂ, ಋಷಿಗಳ ಆಶ್ರಮದಲ್ಲಿಯೇ ಇದ್ದುಕೊಂಡೇ ಈ ಸಹಜ ಪ್ರಕೃತಿ ಮಡಿಲಲ್ಲಿಯೇ ವಿದ್ಯೆ ಕಲಿತರು. ಪರಿಸರ ಕಾಪಾಡಿಕೊಳ್ಳುವುದರ ಮಹತ್ವ ಅರಿತರು. ಇಂದೂ ಕೂಡ ಪ್ರತಿಯೊಬ್ಬರೂ ಪರಿಸರದ ಮಹತ್ವ ಅರಿಯಬೇಕಾಗಿದೆ ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಮಾದಪ್ಪ, ಸದಸ್ಯರಾದ ಕರಿಬಸಪ್ಪ, ಬಸವರಾಜಪ್ಪ, ಸಾಧಿಕ್, ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿ ಜಗನ್ನಾಥ್, ಆರ್ ಎಫ್  ದೇವರಾಜ್, ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಗ್ರಾಮಸ್ಥರು, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.