ಪರಿಸರ ಸಂರಕ್ಷಣೆ ಎಲ್ಲರ ಹೊಣೆ : ನಾಗರಾಜ


ಸಂಜೆವಾಣಿ ವಾರ್ತೆ
ಗಂಗಾವತಿ, ಜೂ.06 : ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳಿಗಾರ ಊಟಿ ಕೆರೆ (ಅಮೃತ ಸರೋವರ ) ದಡದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಈ ವೇಳೆ ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳಾದ ನಾಗರಾಜ ಅವರು ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು.  ಉತ್ತಮ ಆರೋಗ್ಯ ಹೊಂದಲು ನಮ್ಮ ಸುತ್ತಮುತ್ತ ಸ್ವಚ್ಛ, ಸುಂದರ ಪರಿಸರ ನಿರ್ಮಿಸುವುದು ಅತ್ಯಗತ್ಯವಾಗಿದೆ. ಎಲ್ಲರೂ ಮನೆಗೊಂದು ಸಸಿ ನೆಡಬೇಕು ಎಂದರು. ಮಲ್ಲಾಪುರ ಗ್ರಾಪಂ ಪಿಡಿಓ ಶ್ರೀನಿವಾಸ ಪತ್ತಾರ ಅವರು ಮಾತನಾಡಿ, ನರೇಗಾ ಯೋಜನೆಯಡಿ ಅಬೀವೃದ್ಧಿಗೊಂಡ ಅಮೃತ ಸರೋವರ ಸುತ್ತಲೂ ಸಸಿ ನೆಡುವ ಉದ್ದೇಶ ಹೊಂದಲಾಗಿದೆ. ಸುತ್ತಲೂ ಹಚ್ಚಹಸಿರಿನ ವಾತಾವರಣ ನಿರ್ಮಾಣ ಮೂಡಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಗ್ರಾ.ಪಂ. ಅಧ್ಯಕ್ಷರಾದ ಕೃಷ್ಣ ಆಳೂರು ಅವರು ಸಸಿಗೆ ನೀರೆರೆಯುವ ಮೂಲಕ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಗ್ರಾಪಂ ಸದಸ್ಯರಾದ ಧಂಜಪ್ಪ, ತಾಲೂಕು ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಗ್ರಾಪಂ ಸಿಬ್ಬಂದಿಗಳು, ಅರಣ್ಯ ಇಲಾಖೆ ಸಿಬ್ಬಂದಿಗಳು, ನರೇಗಾ ಕೂಲಿಕಾರರು ಇದ್ದರು.