ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯ

ಕಲಬುರಗಿ :ಜೂ.05: ಮಾನವ ಪರಿಸರದ ಮೇಲೆ ನಿರಂತರವಾಗಿ ತನ್ನ ದಬ್ಬಾಳಿಕೆ ಮಾಡುತ್ತಾ, ಪ್ರಾಣಿ ಮತ್ತು ಸಸ್ಯ ಸಂಕುಲಗಳನ್ನು ನಾಶ ಮಾಡಿ ಪರಿಸರದ ಅಸಮತೋಲನ ಉಂಟಾಗಲು ಕಾರಣವಾಗಿದ್ದಾನೆ. ಇದರಿಂದ ಪರಿಸರ ದಿನೇ-ದಿನೇ ಅವನತಿಯತ್ತ ಸಾಗಿದ್ದು, ಇದು ಹೀಗೆಯೇ ಮುಂದುವರೆದರೆ ಇನ್ನೂ ಕೆಲವೇ ವರ್ಷಗಳಲ್ಲಿ ಪರಿಸರಕ್ಕೆ ಗಂಡಾಂತರ ತಪ್ಪಿದ್ದಲ್ಲ. ಆದ್ದರಿಂದ ಪರಿಸರ ಸಂರಕ್ಷಣೆ ಮಾಡುವದು ಇಂದಿನ ತುರ್ತು ಅಗತ್ಯವಾಗಿದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ಚೆಕ್ ಪೋಸ್ಟ್ ಸಮೀಪದಲ್ಲಿರುವ ಕಸ್ತೂರಿ ನಗರದಲ್ಲಿ ‘ವಿಶ್ವ ಪರಿಸರ ದಿನಾಚರಣೆ’ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶದ ಒಟ್ಟು ಭೂಪ್ರದೇಶದಲ್ಲಿ ಶೇ.33ರಷ್ಟು ಅರಣ್ಯ ಪ್ರದೇಶವಿರಬೇಕು. ಆದರೆ ಪ್ರಸ್ತುತ ಶೇ.21ರಷ್ಟಿದ್ದು, ಶೇ.12ರಷ್ಟು ಕೊರತೆಯಿದೆ. ಅರಣ್ಯಗಳ ಪ್ರಮಾಣ ಗಣನೀಯ ಪ್ರಮಾಣ ಇಳಿಕೆಯಾದ್ದರಿಂದ, ವಾಹನಗಳ ಮತ್ತು ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗಿದ್ದರಿಂದ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ ಮತ್ತು ಕಾರ್ಬನ್ ಮೊನಾಕ್ಸೈಡ್‍ಗಳ ಪ್ರಮಾಣ ಹೆಚ್ಚಾಗಿ ಜಾಗತಿಕ ತಾಪಮಾನ ಉಂಟಾಗುತ್ತಿದೆ. ಆದ್ದರಿಂದ ಎಲ್ಲೆಡೆ ವ್ಯಾಪಕವಾಗಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆÉ ಮಾಡಬೇಕಾಗಿದೆಯೆಂದರು.
ಸಮಾಜ ಸೇವಕ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಪ್ರತಿಯೊಂದು ಜೀವಿ ಜನಿಸಿ, ಬೆಳವಣಿಗೆ ಹೊಂದಲು ಪರಿಸರ ತುಂಬಾ ಅಗತ್ಯವಾಗಿದೆ. ನಮ್ಮೆಲ್ಲರ ಆವಾಸ ಸ್ಥಾನವಾದ ಪರಿಸರವಿಂದು ಅನೇಕ ಕಾರಣಗಳಿಂದ ಹಾಳಾಗುತ್ತಿದ್ದು, ಅದರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿ,ಅದನ್ನು ಆಚರಣೆಯಲ್ಲಿ ತಂದರೆ ಮಾತ್ರ ಪರಿಸರದ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದರು.
ಪ್ರಮುಖರಾದ ನೀಲಕಂಠಯ್ಯ ಹಿರೇಮಠ, ಬಸಯ್ಯಸ್ವಾಮಿ ಹೊದಲೂರ, ವಿಕ್ರಮ ಗಂಗಾಣೆ, ಶಂಕರ ಬನಶೆಟ್ಟಿ, ಬಸವರಾಜ ರಜಗಿರಿ,ವೀರಭದ್ರ ಸುತಾರ, ಸಚಿನ್ ಬಿರಾದಾರ ಮತ್ತಿತರರಿದ್ದರು.