ಪರಿಸರ ಸಂರಕ್ಷಣೆಯ ಕಾರ್ಯ ನಿರಂತರವಾಗಿ ಜರುಗಲಿ

oplus_131074

ಕಲಬುರಗಿ :ಜೂ.5: ಪರಿಸರ ಸಂರಕ್ಷಣೆಯ ಕಾರ್ಯ ಕೆಲವು ವ್ಯಕ್ತಿಗಳು, ಸಂಸ್ಥೆಗಳು ಮಾತ್ರ ಮಾಡಿದರೆ ಸಾಲದು. ಪರಿಸರ ದಿನಾಚರಣೆಗೆ ಮಾತ್ರ ಸೀಮಿತವಾಗಬಾರದು. ಪ್ರತಿಯೊಂದು ಜೀವರಾಶಿ ಉಳಿಯಬೇಕಾದರೆ ಪರಿಸರದ ಸಂರಕ್ಷಣೆÉ ಅಗತ್ಯ. ಅದಕ್ಕಾಗಿ ಪ್ರತಿಯೊಬ್ಬರು ಒಂದು ಸಸಿ ನೆಟ್ಟು ಪೋಷಿಸುವ ಮೂಲಕ ಅರಣ್ಯಗಳ ರಕ್ಷಣೆ ಮಾಡಿದರೆ ಪರಿಸರ ಸಮತೋಲನವಾಗಿರಲು ಸಾಧ್ಯವಿದೆ ಎಂದು ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಮಾರ್ಮಿಕವಾಗಿ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿ ‘ಸ್ವಾತಿ ಪ್ರೌಢಶಾಲೆ’, ‘ಬಸವೇಶ್ವರ ಸಮಾಜ ಸೇವಾ ಬಳಗ’, ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಮತ್ತು ‘ಕನ್ನಡ ಜಾನಪದ ಪರಿಷತ್’ ಇವುಗಳ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ‘ವಿಶ್ವ ಪರಿಸರ ದಿನಾಚರಣೆ’ಯ ಪ್ರಯುಕ್ತ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಅವರು ಮಾತನಾಡಿದರು.
ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಅರಣ್ಯಗಳ ಪ್ರಮಾಣ ಕಡಿಮೆಯಾಗಿ ಸೂಕ್ತ ಕಾಲಕ್ಕೆ ಮಳೆ-ಬೆಳೆಯಾಗದೆ ಪರಿಸರದಲ್ಲಿ ಏರು-ಪೇರುಗಳಾಗಿ ನೈಸರ್ಗಿಕ ಅವಘಡಗಳಾಗುತ್ತಿವೆ. ಅರಣ್ಯಗಳಿಂದ ಸಾಕಷ್ಟು ಪ್ರಯೋಜನೆಗಳಿದ್ದು, ಅವುಗಳನ್ನು ಮಗುವಿನಂತೆ ಪೋಷಿಸಬೇಕು. ನಮ್ಮ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕಡಿಮೆಯಿದ್ದು, ವ್ಯಾಪಕವಾಗಿ ಗಿಡಗಳನ್ನು ನೆಟ್ಟು ಬೆಳೆಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಓಂ ಶ್ರೀ ಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಕರಾವಿಪ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್.ಬಿರಾದಾರ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಸಮಾಜ ಸೇವಕ ಶಿವಶರಣಯ್ಯ ಮಠಪತಿ ಸೇರಿದಂತೆ ಇನ್ನಿತರರು ಇದ್ದರು.