ಪರಿಸರ ಸಂರಕ್ಷಣೆಯಿಂದಲೇ ನಮ್ಮೆಲ್ಲರ ಉಳಿವು: ಭೀಮರಾವ್ ಪಾಟೀಲ್

ಬೀದರ:ಜೂ.6: ಮುಂದಿನ ದಿನಗಳಲ್ಲಿ ಉತ್ತಮ ಗಾಳಿ, ಮಳೆ ಸಿಗಬೇಕಾದರೆ ಇಂದಿನಿಂದಲೇ ಗಿಡಮರಗಳನ್ನು ಬೆಳೆಸಿ ಪರಿಸರ ಸಂರಕ್ಷಿಸಬೇಕಿದೆ ಎಂದು ಸೂರ್ಯ ಫೌಂಡೇಶನ್‍ನ ಶಿಕ್ಷಕರಾದ ಭೀಮರಾವ್ ಪಾಟೀಲ್ ಅವರು ತಿಳಿಸಿದರು.

ಜಿಲ್ಲೆಯ ರಾಚಪ್ಪ ಗೌಡಗಾಂವ್ ಗ್ರಾಮದಲ್ಲಿ ಸೂರ್ಯ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ವೃಕ್ಷಾರೋಪಣ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭೂಮಿಯ ಮೇಲಿರುವ ಜೀವ ಜಂತುಗಳು ಜೀವಿಸಲು ಬೇಕಿರುವ ಶುದ್ದ ಗಾಳಿಯನ್ನು ನೀಡುವ ಗಿಡ-ಮರಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಗಿಡ-ಮರಗಳ ಕೊರತೆಯಿಂದಾಗಿಯೇ ಇಂದು ಆಕ್ಸಿಜನ್ ಸಮಸ್ಯೆಯಿಂದ ಮರಣಗಳು ಸಂಭವಿಸುವುದನ್ನು ಕಾಣುತ್ತಿದ್ದೇವೆ. ಇದು ತಪ್ಪಿಸಬೇಕೆಂದಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬರು ಗಿಡಗಳನ್ನು ನೆಡಬೇಕು ಎಂದು ತಿಳಿಸಿದರು.

ತಾವಷ್ಟೇ ಅಲ್ಲದೇ ಸುತ್ತಲಿನ ಮನೆಗಳಲ್ಲಿಯೂ ಹೊಸ ಗಿಡಗಳನ್ನು ನೆಡುವಂತೆ ತಿಳುವಳಿಕೆ ಮೂಡಿಸಬೇಕು. ಕೆಲವೆಡೆ ಕೇವಲ ಗಿಡಗಳನ್ನು ನೆಟ್ಟು ಸುಮ್ಮನಾಗುತ್ತಿರುವುದು ಕಾಣುತ್ತಿದ್ದೇವೆ. ಇದು ಸರಿಯಲ್ಲ. ನೆಟ್ಟ ಗಿಡಗಳನ್ನು ಉತ್ತಮವಾಗಿ ಬೆಳೆಯುವಂತೆ ಕಾಪಾಡಬೇಕು ಎಂದು ಪಾಟೀಲ್ ಅವರು ಸಲಹೆ ಮಾಡಿದರು.

ಸೂರ್ಯ ಫೌಂಡೇಶನ್‍ನಿಂದ ಭಾಲ್ಕಿ ತಾಲ್ಲೂಕಿನ ಧನ್ನೂರಾ, ಲಾದಾ, ಭಾತಂಬ್ರಾ ಗ್ರಾಮಗಳಲ್ಲಿ ವೃಕ್ಷಾರೋಪಣ ಅಭಿಯಾನ ನಡೆಯಿತು.

ಈ ಸಂದರ್ಭದಲ್ಲಿ ಸೂರ್ಯ ಫೌಂಡೇಶನ್‍ನ ಮಲ್ಲಿಕಾರ್ಜುನ ಪಾಟೀಲ್, ಆಕಾಶ ಪಟ್ನೆ, ಅನೀಲ ಪಸಾರ್ಗಿ, ಸಂಗಮೇಶ ದಾನಿ, ಸಂಗಮೇಶ ಬಿರಾದಾರ, ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.