ಭಾಲ್ಕಿ:ಜೂ.14: ಪರಿಸರ ಸಂರಕ್ಷಣೆಗೆ ಸಮುದಾಯ ಸಹಭಾಗಿತ್ವ ಅಗತ್ಯ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‍ನಡಿ ನಡೆಯುತ್ತಿರುವ ಗುರುಪ್ರಸಾದ ಪ್ರೌಢ ಶಾಲೆ ಆವರಣದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಸೋಮವಾರ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯನ ಐಷರಾಮಿ ಬದುಕಿನಿಂದ ಪರಿಣಾಮ ಗಿಡ ಮರಗಳಿಗೆ ಕೊಡಲಿ ಏಟು ಬೀಳುತ್ತಿದೆ. ಸಕಾಲಕ್ಕೆ ಮಳೆ ಬೆಳೆ ಆಗುತ್ತಿಲ್ಲ. ಇದರಿಂದ ನಾನಾ ತೊಂದರೆ ಅನುಭವಿಸುತ್ತಿದ್ದರೂ ಕೂಡ ಮನುಷ್ಯನ ಅರಿವಿಗೆ ಬರುತ್ತಿಲ್ಲ. ಜತೆಗೆ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಹೀಗೆ ಮುಂದುವರೆದರೇ ಮುಂದಿನ ಪೀಳಿಗೆ ಜೀವನ ಊಹಿಸುವುದು ಕಷ್ಟ.
ಹಾಗಾಗಿ ಪ್ರತಿಯೊಬ್ಬರು ಪರಿಸರದ ಮಹತ್ವ ಅರಿತುಕೊಂಡು ಹೆಚ್ಚೆಚ್ಚು ಗಿಡ ಮರಗಳನ್ನು ನೆಟ್ಟು ಪೋಷಣೆ ಮಾಡುವ ಸಂಕಲ್ಪ ತೊಡಬೇಕು. ತಾಲೂಕು ಸೇರಿ ಜಿಲ್ಲೆಯಲ್ಲಿ ಹೆಚ್ಚು ಗಿಡ ನೆಟ್ಟು ಹಸಿರೀಕರಣ ಪ್ರದೇಶ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಶುದ್ಧ ಗಾಳಿ ನೂರು ಗುಳಿಗಳಿಗೆ ಸಮ ಹಾಗಾಗಿ ಪರಿಸರ ಸಮತೋಲನ ಕಾಪಾಡಿದರೇ ಶುದ್ಧ ಗಾಳಿ, ನೀರು, ಬೆಳಕು ಸಿಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ನೇತೃತ್ವ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ತಾಲೂಕಿನಲ್ಲಿ ಹೆಚ್ಚೆಚ್ಚು ಗಿಡ ನೆಡಲು ಮತ್ತು ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಶಿಧರ ಕೋಸಂಬೆ, ಸಂಗಮೇಶ ವಾಲೆ, ರಾಜಕುಮಾರ ಬಿರಾದಾರ್, ಟಿಂಕು ರಾಜಭವನ, ಮುಖ್ಯಗುರು ಬಾಬು ಬೆಲ್ದಾಳ, ಸಾಮಾಜಿಕ ವಲಯ ಅಧಿಕಾರಿ ವೀರೇಶ ಕಲ್ಯಾಣಿ, ಪ್ರಾದೇಶಿಕ ವಲಯ ಅಧಿಕಾರಿ ಪ್ರವೀಣ ಮೋರೆ ಸೇರಿದಂತೆ ಹಲವರು ಇದ್ದರು.