ಪರಿಸರ ಸಂರಕ್ಷಣೆಗೆ ಯುವಕರು ಸ್ಪಂದಿಸಲು ಕರೆ


ಸಂಜೆವಾಣಿ ವಾರ್ತೆ
ಕೊಪ್ಪಳ, ಜೂ.08: ಇತ್ತೀಚಿನ ದಿನಗಳಲ್ಲಿ ಪರಿಸರವು ತೀವ್ರ ರೀತಿಯಲ್ಲಿ ಹಾಳಾಗುತ್ತಿರುವುದು ನೋವಿನ ಸಂಗತಿ. ರಸ್ತೆ ಅಗಲೀಕರಣ, ನಗರೀಕರಣ ಹೀಗೆ ನಾನಾ ಕಾರಣಗಳಿಂದ ಪರಿಸರವನ್ನು ನಾಶ ಮಾಡುತ್ತಾ ಹೊರಟಿರುವುದು ದುರಂತದ ಸಂಗತಿ. ಕಾಡಿನ ನಾಶದಿಂದಾಗಿ ಕಾಡಿನ ಪ್ರಾಣಿಗಳು ನಾಡಿಗೆ ಹೊರಟಿರುವುದು ನೋವಿನ ಸಂಗತಿ. ಕಡಿದರೆ ಕಾಡು, ನೆತ್ತರಾದೀತು ನಾಡು  ಎನ್ನುವಂತೆ ಮುಂದಿನ ದಿನಮಾನಗಳಲ್ಲಿ ನಾವು ಮನೆಯಿಂದ ಹೊರ ಬರಬೇಕಾದರೆ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಆಯುಧಗಳನ್ನು ಹಿಡಿದುಕೊಂಡು ಬರುವಂತಹ  ದಿನಗಳು ದೂರವಿಲ್ಲ. ಇತ್ತೀಚಿನ ದಿನಗಳಲ್ಲಿ ಕಾಂಕ್ರೀಟ್ ಬಳಕೆ ಹೆಚ್ಚಾಗಿರುವುದರಿಂದ ಭೂಮಿಯಲ್ಲಿ ಎಲ್ಲಿಯೂ ನೀರು ಇಂಗುತ್ತಿಲ್ಲ. ನಾಡಿನ ತಾಪಮಾನ ವರ್ಷದಿಂದ ವರ್ಷಕ್ಕೆ ಏರುತ್ತಾ ಸಾಗಿ ಹಿಮ ತೀವ್ರಗತಿಯಲ್ಲಿ ಕರಗುತ್ತಿರುವುದು ಜಲಪ್ರಳಯದ ಮುನ್ಸೂಚನೆಯಾಗಿದೆ ಎಂದು ಪರಿಸರ ಪ್ರೇಮಿಯಾದ ಜಿ.ಎನ್. ಹಳ್ಳಿ ಹೇಳಿದರು.  
ಅವರು ಅಳವಂಡಿ ಸಮೀಪದ ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಪರಿಸರ ಸಂರಕ್ಷಣೆಯಲ್ಲಿ ಯುವಕರ ಪಾತ್ರ ಎನ್ನುವ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಅವರು ಮುಂದುವರೆದು ಮಾತನಾಡುತ್ತಾ, ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗಿ ಇರುವ ಒಂದೇ ಒಂದು ಭೂಮಿಯನ್ನು ನಾವು ಕಳೆದುಕೊಳ್ಳುವ ಅಪಾಯವಿದೆ. ಕೆರೆ, ಬಾವಿ, ಹೊಲದಲ್ಲಿರುವ ವಡ್ಡುಗಳು ಕೂಡ ನಾಶವಾಗುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಶುದ್ಧವಾದ ಗಾಳಿ ಸಿಗದೇ ಲಕ್ಷಾಂತರ ಜನರು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಯುವಕರು ಸಮತೋಲನ ಪರಿಸರ ಕಾಪಾಡಿಕೊಳ್ಳಲು ಪರಿಸರವನ್ನು ಸಂರಕ್ಷಿಸಲು ಸನ್ನದ್ಧರಾಗಬೇಕು  ಎಂದರು. ಜೀವಶಾಸ್ತ್ರ ಉಪನ್ಯಾಸಕರಾದ ವೀರಶೇಖರ ಪತ್ತಾರ ಅವರು ಮಾತನಾಡುತ್ತಾ, ಪರಿಸರ ನಮಗೆ ಅನಿವಾರ್ಯವಾಗಿ ಬೇಕಾಗಿದೆ. ಆದರೆ ನಾವು ಪರಿಸರಕ್ಕೆ ಅನಿವಾರ್ಯವಲ್ಲ. ಪರಿಸರದ ಬಗ್ಗೆ ಮಾತನಾಡುವವರ ಸಂಖ್ಯೆಯನ್ನು ಹೆಚ್ಚಿದೆ. ಆದರೆ ನಮ್ಮ ಗ್ರಾಮದ ಪಕ್ಕದ ಬೂದಿಹಾಳದವರಾದ ಜಿ.ಎನ್.ಹಳ್ಳಿಯವರು ನಿಜವಾದ ಪರಿಸರ ಪ್ರೇಮಿಗಳು. ಇವರು ಕಳೆದ ಇಪ್ಪತ್ತು ವರ್ಷಗಳಿಂದಲೂ ಸಹ ಗಿಡ ಮರಗಳನ್ನು ಬೆಳೆಸುತ್ತಾ ಬಂದಿರುವುದು ಸಂತೋಷದ ಸಂಗತಿ. ನಮ್ಮ ಮಹಾವಿದ್ಯಾಲಯದಲ್ಲಿ ಸಹ ಇವರು ಗಿಡಗಳನ್ನು ಹಚ್ಚಿರುವುದು ನಮಗೆಲ್ಲ ಮಾದರಿಯಾಗಿದೆ ಎಂದರು. ಇಂಗ್ಲಿಷ್ ಉಪನ್ಯಾಸಕರಾದ ವೀರಣ್ಣ ಜೋಗಿನ್  ಮಾತನಾಡುತ್ತಾ, ಇತ್ತೀಚಿನ ದಿನಮಾನಗಳಲ್ಲಿ ಸಮುದ್ರದ ಪಕ್ಕದಲ್ಲಿರುವ ಅನೇಕ ದೊಡ್ಡ ದೊಡ್ಡ ಪಟ್ಟಣಗಳು ಮಂಜು ಕರಗುವುದರಿಂದ ಮುಳುಗಡೆಯಾಗುವ ಅಪಾಯವನ್ನು ಎದುರಿಸುತ್ತಿರುವುದು ನೋವಿನ ಸಂಗತಿ. ಈ ಎಲ್ಲಾ ಪ್ರಕೃತಿ ವಿಕೋಪಗಳನ್ನು ತಪ್ಪಿಸಲು ನಾಡನ್ನು ಹಸಿರುಮಯ ಮಾಡಲು ವಿದ್ಯಾರ್ಥಿಗಳು ಪಣತೊಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತಾ, ನಾವೆಲ್ಲಾ ಪ್ರಕೃತಿಯ ಶಿಶುಗಳು. ಪ್ರಕೃತಿ ನಮಗೆ ಉಚಿತವಾಗಿ ಗಾಳಿ, ನೀರು, ಬೆಳಕನ್ನು ನೀಡುತ್ತಿದೆ. ಪ್ರಕೃತಿ ನಮಗೆ ನಿಸ್ವಾರ್ಥ ಗುಣವನ್ನು ಬೋಧಿಸುತ್ತಿದೆ. ಈ ಹಿಂದಿನ ತಲೆಮಾರಿದವರು ನಮಗೆ ಉತ್ತಮವಾದ ಪರಿಸರವನ್ನು ಬಿಟ್ಟು ಹೋಗಿದ್ದಾರೆ. ನಾವೂ ಕೂಡ ನಮ್ಮ ಮುಂದಿನ ಪೀಳಿಗೆ ಉತ್ತಮ ಪರಿಸರವನ್ನು ಬಿಟ್ಟುಕೊಟ್ಟು ಹೋಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಪ್ರಕೃತಿಯ ಆರಾಧಕರಾಗಿ, ಅದನ್ನು ಪೋಷಣೆ ಮಾಡುವ ದೃಢ ನಿರ್ಧಾರ ಮಾಡುವ ಅಗತ್ಯತೆ ಮತ್ತು ಅನಿವಾರ್ಯತೆ ಇದೆ ಎಂದರು.  ಈ ಸಂದರ್ಭದಲ್ಲಿ ಪತ್ರಕರ್ತರಾದ ಬಸವರಾಜ ಮರದೂರು, ಸಿದ್ದು ಹಿರೇಮಠ, ಉಪನ್ಯಾಸಕರಾದ ರಾಚಪ್ಪ ಕೇಸರಬಾವಿ, ಐ.ಎನ್. ಪಾಟೀಲ, ಲತಾ ಕೆ. ಜಿ., ಕೆ. ಉಮಾಕಾಂತರಾವ್, ಅನಿತಾ ದಲಬಂಜನ್, ಗುಜ್ಜಲ ಆಂಜನೇಯ, ಜಯಪಾಲರೆಡ್ಡಿ ಚೆಲ್ಲಾ, ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.