ಪರಿಸರ ಸಂರಕ್ಷಣೆಗೆ ಮುಂದಾಗಲು ಕರೆ

ರಾಮದುರ್ಗ,ಆ.26: ಪ್ರತಿಯೊಬ್ಬರು ಒಂದು ಗಿಡ ನೆಡುವ ಮೂಲಕ ನೈಸರ್ಗಿಕ ಆಮ್ಲಜನಕ ದೊರೆಯುವಂತೆ ಪರಿಸರ ಸಂರಕ್ಷಣೆಯ ಕೆಲಸ ಮಾಡಬೇಕು ಎಂದು ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಹೇಳಿದರು.
ಪಟ್ಟಣದ ಬೀಳಗಿ ನಗರದ ಪುರಸಭೆ ಉದ್ಯಾನವನದಲ್ಲಿ ರೋಟರಿ ಸಂಸ್ಥೆ ಮತ್ತು ಇನ್ನರ್‍ವ್ಹೀಲ್ ಸಂಸ್ಥೆ ಅರಣ್ಯ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕೊರೋನಾ ಸಂದರ್ಭದಲ್ಲಿ ಕೃತಕ ಆಮ್ಲಜನಕ ಪೂರೈಸಲಾಗಿದೆ ಈಗ ಎಲ್ಲರೂ ಸಸಿ ನೆಡುವ ಮೂಲಕ ಎಲ್ಲರಿಗೂ ಉತ್ತಮ ಪರಿಸರ ಮತ್ತು ಗಾಳಿ ದೊರೆಯುವಂತೆ ಮಾಡಲು ಸಾಧ್ಯವಿದ್ದು ಗಿಡ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಅರಣ್ಯ ಸಂರಕ್ಷಣಾಧಿಕಾರಿ ಮೃತ್ಯುಂಜಯ ಗಣಾಚಾರಿ ಮಾತನಾಡಿ ಪ್ರತಿ ವ್ಯಕ್ತಿ ಜನ್ಮದಿನ ಮತ್ತು ಶುಭ ಸಂದರ್ಭದಲ್ಲಿ ಒಂದೋಂದು ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರೆ ಪರಿಸರ ಸಂರಕ್ಷಣೆಯ ಜೊತೆಗೆ ಅರಣ್ಯ ಬೆಳೆಸಲು ಸಹಾಯಕವಾಗುತ್ತದೆ ಎಂದು ಹೇಳಿದರು.
ವನಮಹೋತ್ಸವದ ಅಂಗವಾಗಿ ರೋಟರಿ ಮತ್ತು ಇನ್ನರವ್ಹೀಲ್ ಸದಸ್ಯರು ನಗರದ ಬೀಳಗಿ ನಗರ ಮತ್ತು ವಿದ್ಯಾನಗರದ ಪ್ರತಿ ಮನೆಗೆ ತೆರಳಿ ವಿವಿಧ ಸಸಿಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ನಾಗರಾಜ ಪತ್ತೇಪೂರ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮಹಾಂತೇಶ ಬೈಲವಾಡ, ಇನ್ನರವ್ಹೀಲ್ ಅಧ್ಯಕ್ಷೆ ಸಂದ್ಯಾ ಪತ್ತೇಪೂರ, ಕಾರ್ಯದರ್ಶಿ ಶ್ವೇತಾ ಬೈಲವಾಡ, ಸದಸ್ಯರಾದ ಅಮರ ದೂತ, ಎಸ್.ಎಸ್. ಧಡೇದ, ಪ್ರಭಾಕರ ಬಣಕಾರ, ಸೋಮಶೇಖರ ಸಿದ್ಲಿಂಗಪ್ಪನವರ, ರಾಕೇಶ ಪತ್ತೇಪೂರ, ಶಿವಯೋಗಿ ಚಿಕ್ಕೋಡಿ, ಸತೀಶ ಜಿಣಗಾ ಸೇರಿದಂತೆ ಉಭಯ ಸಂಸ್ಥೆಗಳ ಸದಸ್ಯರು ಇದ್ದರು.