ಪರಿಸರ ಲೂಟಿ: ಕಂಡೂ ಕಾಣದಂತಿರುವ ಅಧಿಕಾರಿಗಳು

ಕೆ.ಆರ್.ಪೇಟೆ.ಜ.03:- ಕಾಮಗಾರಿಯ ಹೆಸರಿನಲ್ಲಿ ಗುತ್ತಿಗೆದಾರರು ತಾಲೂಕಿನಾದ್ಯಂತ ಬೆಟ್ಟ ಗುಡ್ಡಗಳ ಒಡಲನ್ನು ಬಗೆಯುತ್ತಾ ಪರಿಸರ ನಾಶದಲ್ಲಿ ತೊಡಗಿದ್ದರೂ ತಾಲೂಕು ಆಡಳಿತ ಯಾವುದೇ ಕ್ರಮ ವಹಿಸದೆ ಮೌನವಾಗಿದೆ.
ತಾಲೂಕಿನ ಹೊಸಹೊಳಲು ಚಿಕ್ಕಕೆರೆಯನ್ನು ಪ್ರವಾಸಿ ತಾಣವನ್ನಾಗಿಸುವ ಸಲುವಾಗಿ 10 ಕೋಟಿ ರೂ ವೆಚ್ಚದಲ್ಲಿ ಕೆರೆಯ ಒಡಲಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಇದಕ್ಕಾಗಿ ಕೆರೆಯ ಒಡಲಿನಲ್ಲಿ ತುಂಬಿದ್ದ ನೀರನ್ನು ಖಾಲಿ ಮಾಡಿ ಕೆರೆಯೊಳಗೆ ನಡುಗಡ್ಡೆಗಳನ್ನು ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಕೆರೆಯ ಒಡಲಿನಲ್ಲಿ ಕೃತಕ ನಡುಗೆಡ್ಡೆಗಳನ್ನು ನಿರ್ಮಿಸಿ ಬೋಟಿಂಗ್ ವ್ಯವಸ್ಥೆ ಮತ್ತು ವಿಹಾರ ತಾಣವನ್ನಾಗಿಸುವುದು ಕೆರೆ ಕಾಮಗಾರಿಯ ಯೋಜನೆಯ ಉದ್ದೇಶ. ಹೊಸಹೊಳಲು ಕೆರೆ ಕಾಮಗಾರಿಗಳಲ್ಲದೆ ಅತಿವೃಷ್ಠಿಯಿಂದ ಹಾನಿಗೀಡಾದ ಕೆರೆಗಳ ಪುನರ್ ನಿಮಾಣ ಕಾಮಗಾರಿಗಳು ಕೆಲವು ಕಡೆ ನಡೆಯುತ್ತಿವೆ. ಕೆರೆ ಕಾಮಗಾರಿಗೆ ಅಗತ್ಯವಾದ ಮಣ್ಣನ್ನು ಪರಿಸರಕ್ಕೆ ಧಕ್ಕೆಯಾಗದಂತೆ ಗುತ್ತಿಗೆದಾರರು ಖಾಸಗಿ ವ್ಯಕ್ತಿಗಳ ಜಮೀನಿನಿಂದ ಖರೀದಿಸಿ ತರಬೇಕು. ಸರ್ಕಾರಿ ಭೂಮಿಯಾದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಇಲಾಖೆ, ಅರಣ್ಯ ಇಲಾಖೆಗಳಿಂದ ಅನುಮತಿ ಪಡೆದು ನಿಯಮಾನುಸಾರ ಪ್ರತಿ ಟನ್ ಮಣ್ಣಿಗೆ ರಾಜಧನ ಪಾವತಿಸಿ ಮಣ್ಣಿನ ಗಣಿಗಾರಿಕೆ ನಡೆಸಿ ಕಾಮಗಾರಿ ಸ್ಥಳಕ್ಕೆ ಅಗತ್ಯವಾದ ಮಣ್ಣು ತರಬೇಕು. ಆದರೆ ತಾಲೂಕಿನಲ್ಲಿ ಇದ್ಯಾವ ನಿಯಮಗಳು ಪಾಲನೆಯಾಗುತ್ತಿಲ್ಲ. ಕೆರೆ ಕಟ್ಟೆಗಳ ಕಾಮಗಾರಿಗಳನ್ನು ಸಚಿವ ಕೆ.ಸಿ.ನಾರಾಯಣಗೌಡರ ಬೆಂಬಲಿಗರೇ ನಿರ್ವಹಿಸುತ್ತಿರುವುದರಿಂದ ಸಚಿವರ ಬೆಂಬಲಿತ ಗುತ್ತಿಗೆದಾರರು ನಡೆಸುತ್ತಿರುವ ಪರಿಸರ ಲೂಟಿಯಯನ್ನು ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ.
ಹೊಸಹೊಳಲು ಕೆರೆ ಕಾಮಗಾರಿಗಾಗಿ ಗುತ್ತಿಗೆದಾರರು ಈಗಾಗಲೇ ಪಟ್ಟಣದ ಹೊರವಲಯದ ಹೊಸಹೊಳಲು ಪಕ್ಕದ ಬೆಟ್ಟಸಾಲು, ಕೊಮ್ಮೇನಹಳ್ಳಿ ಬಳಿ ಜಲಸೂರು ಹೈವೇಗೆ ಹೊಂದಿಕೊಂಡಂತಿರುವ ಬೆಳ್ಳಿ ಬೆಟ್ಟದ ಸಾಲಿನ ಬೆಟ್ಟದ ಒಡಲನ್ನು ದೊಡ್ಡ ದೊಡ್ಡ ಜೆಸಿಬಿ, ಇಟಾಚಿ ಯಂತ್ರಗಳ ಮೂಲಕ ದೋಚಿದ್ದಾರೆ. ನೂರಾರು ಟಿಪ್ಪರ್ ಗಳ ಮೂಲಕ ಬೆಟ್ಟದ ಮಣ್ಣನ್ನು ದೋಚಿ ಬೆಟ್ಟದ ಬುಡವನ್ನೆ ನಾಶಪಡಿಸಲಾಗಿದೆ. ಇದೇ ರೀತಿ ಸಂತೇಬಾಚಹಳ್ಳಿ ಹೋಬಳಿಯ ಆದಿಹಳ್ಳಿ ಪಕ್ಕದ ಗುಡ್ಡವನ್ನು ದೋಚಲು ಗುತ್ತಿಗೆದಾರರು ಮುಂದಾಗಿದ್ದು ಜೆಸಿಬಿ ಮತ್ತು ಇಟಾಚಿ ಬಳಸಿ ಮಣ್ಣು ತುಂಬಲು ಮುಂದಾಗಿದ್ದಾರೆ. ತಮ್ಮೂರಿನ ಬೆಟ್ಟವನ್ನು ಅಗೆದು ಮಣ್ಣು ತುಂಬಲು ಹೋಗಿದ್ದ ಯಂತ್ರಗಳನ್ನು ತಡೆದು ನಿಲ್ಲಿಸಿದ ಆದಿಹಳ್ಳಿ ಗ್ರಾಮಸ್ಥರು ಮಣ್ಣು ತುಂಬದಂತೆ ಪ್ರತಿರೋಧ ಒಡ್ಡಿದ್ದಾರೆ. ಇದು ಸರ್ಕಾರಿ ಜಾಗ, ಇಲ್ಲಿ ಮಣ್ಣು ತುಂಬಿದರೆ ನಿಮಗೇನು ಎಂದು ಪ್ರಭಾವಿ ಗುತ್ತಿಗೆದಾರನ ಹೆಸರು ಹೇಳಿ ಜೆಸಿಬಿ ಮತ್ತು ಟಿಪ್ಪರ್ ಚಾಲಕರು ಗ್ರಾಮಸ್ಥರನ್ನೆ ಬೆದರಿಸಲು ಮುಂದಾಗಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಜೆಸಿಬಿ ಮತ್ತು ಟಿಪ್ಪರ್ ಚಾಲಕರ ಬೆದರಿಕೆಗೆ ಬಗ್ಗದೆ ಗ್ರಾಮಸ್ಥರು ತಮ್ಮೂರಿನ ಬೆಟ್ಟವನ್ನು ಅಗೆಯಲು ಬಂದಿದ್ದವರನ್ನು ವಾಪಸ್ ಕಳುಹಿಸಿರುವ ಘಟನೆ ಶುಕ್ರವಾರ (ಡಿ.30) ನಡೆದಿದೆ. ಗುರುವಾರ ರಾತ್ರಿ ಗ್ರಾಮಸ್ಥರು ನಿದ್ರೆಗೆ ಜಾರಿದ ವೇಳೆಯಲ್ಲಿ ಗುತ್ತಿಗೆದಾರ ಬೆಟ್ಟ ಅಗೆಯಲು ಆರಂಭಿಸಿದ್ದಾನೆ. ಇದಕ್ಕಾಗಿ ಎರಡು ಜೆಸಿಬಿ ಯಂತ್ರಗಳು ಮತ್ತು 11 ಟಿಪ್ಪರ್ ಬಳಕೆ ಮಾಡಿದ್ದು ಶುಕ್ರವಾರ ಬೆಳಿಗ್ಗೆ ಮಣ್ಣು ಅಗೆತದ ಕೆಲಸ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಎಚ್ಚೆತ್ತ ಗ್ರಾಮಸ್ಥರು ತಾಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಆದಿಹಳ್ಳಿ ಮೀನಾಕ್ಷಿ ನೇತೃತ್ವದಲ್ಲಿ ಪ್ರತಿರೊಧ ವ್ಯಕ್ತಪಡಿಸಿ ಮಣ್ಣು ಕಳ್ಳತನವನ್ನು ತಡೆಹಿಡಿದು ತಮ್ಮೂರಿನ ಬೆಟ್ಟದ ರಕ್ಷಣೆಗೆ ಮುಂದಾಗಿದ್ದಾರೆ.
ಪವಿತ್ರ ಬೆಟ್ಟ: ಆದಿಹಳ್ಳಿಯನ್ನು ಗುಡ್ಡದ ಆದಿಹಳ್ಳಿ ಎಂದೇ ಕರೆಯಲಾಗುತ್ತದೆ. ಮಣ್ಣು ಅಗೆತಕ್ಕೆ ಮುಂದಾಗಿರುವ ಬೆಟ್ಟ ತಿಮ್ಮಪ್ಪನ ಬೆಟ್ಟವಾಗಿದ್ದು ಇಲ್ಲಿ ಪವಿತ್ರ ತಿಮ್ಮಪ್ಪನ ದೇವಾಲಯವಿದೆ. ಇದೇ ಬೆಟ್ಟದ ಜಾಗದಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆಯಿದೆ. ನಮ್ಮೂರಿನ ಬೆಟ್ಟದ ಪಾವಿತ್ರ್ಯ ತೆಯನ್ನು ಮಣ್ಣು ಕಳ್ಳರು ಹಾಳು ಮಾಡಲು ಮುಂದಾಗಿದ್ದು ಇದಕ್ಕೆ ಕೆ.ಆರ್.ಪೇಟೆಯ ತಹಸೀಲ್ದಾರರು ಕುಮ್ಮಕ್ಕು ನೀಡಿದ್ದಾರೆಂದು ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆದಿಹಳ್ಳಿ ಮೀನಾಕ್ಷಿ ಆರೋಪಿಸಿದ್ದು ಮಣ್ಣು ಅಗೆಯಲು ಬೇಕಾದ ಸ್ಥಳವನ್ನು ತಹಸೀಲ್ದಾರರೇ ಖುದ್ದು ಗುರುತು ಮಾಡಿಕೊಟ್ಟಿದ್ದಾರೆ. ಮಣ್ಣು ಅಗೆತದ ಬಗೆ ಗಣಿ ಮತ್ತು ಭೂವಿಜ್ಞಾನ ಇಲಾಕೆಗೂ ಮಾಹಿತಿ ನೀಡಲಾಗಿದೆ. ಆದರೆ ಇದುವರೆಗೆ ಯಾರೂ ಇಲ್ಲಿಗೆ ಬಂದಿಲ್ಲ. ಕ್ರಮಕ್ಕೆ ಒತ್ತಾಯಿಸಿ ತಿಮ್ಮಪ್ಪನ ಗುಡ್ಡದ ಬಳಿಯೇ ಧರಣಿ ಆರಂಭಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಕ್ರಮಕ್ಕೆ ಒತ್ತಾಯ: ತಾಲೂಕಿನಾದ್ಯಂತ ಸಚಿವ ಕೆ.ಸಿ.ನಾರಾಯಣಗೌಡ ಅಭಿಮಾನಿ ಬಳಗದ ಗುತ್ತಿಗೆದಾರರು ಬೆಟ್ಟಗುಡ್ಡಗಳನ್ನು ಬಗೆದು ಅಮೂಲ್ಯ ಪ್ರಾಕೃತಿಕ ಸಂಪತ್ತನ್ನು ಹಾಳು ಮಾಡುತ್ತಿದ್ದರೂ ಯಾವುದೇ ಕ್ರಮ ವಹಿಸಿದ ತಾಲೂಕು ಆಡಳಿತದ ಕ್ರಮವನ್ನು ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಖಂಡಿಸಿದ್ದಾರೆ. ಈ ಹಿಂದೆ ಕೊಮ್ಮೇನಹಳ್ಳಿ ಬಳಿಯ ಬೆಳ್ಳಿ ಬೆಟ್ಟದ ಸಾಲಿನ ಅಂಚನ್ನು ಜಲಸೂರು- ಬೆಂಗಳೂರು ಹೆದ್ದಾರಿ ನಿರ್ಮಾಣ ಕಾಮಗಾರಿಯ ವೇಳೆ ನಾಶಪಡಿಸಲು ಮುಂದಾಗಿದ್ದಾಗ ರೈತಸಂಘ ತನ್ನ ವಿರೋಧ ವ್ಯಕ್ತಪಡಿಸಿತ್ತು. ತಕ್ಷಣವೇ ಎಚ್ಚೆತ್ತ ಅಂದಿನ ತಹಸೀಲ್ದಾರರು ಸ್ಥಳಪರಿಶೀಲನೆ ಮಾಡಿ ಬೆಟ್ಟ ಅಗೆಯುವುದನ್ನು ನಿಲ್ಲಿಸಿದ್ದರು. ಆದರೆ ಕಾನೂನು ಮೀರಿ ಬೆಟ್ಟ ಅಗೆದ ಹೆದ್ದಾರಿ ಪ್ರಾಧಿಕಾರದ ವಿರುದ್ದ ಪ್ರಕರಣ ದಾಖಲಿಸಲಿಲ್ಲ. ಇದೀಗ ಸಚಿವರ ಬೆಂಬಲಿಗರು ಕಂಡಕಂಡಲ್ಲಿ ಬೆಟ್ಟಗುಡ್ಡಗಳನ್ನು ಅಗೆದು ಪರಿಸರ ನಾಶ ಮಾಡುತ್ತಿದ್ದರೂ ತಾಲೂಕು ಆಡಳಿತ, ಪರಿಸರ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿದ್ದೆ ಮಾಡುತ್ತಿದೆ. ತಕ್ಷಣವೇ ಸರ್ಕಾರಿ ಆಡಳಿತ ಎಚ್ಚೆತ್ತು ಕೊಳ್ಳಬೇಕು. ತಾಲೂಕಿನ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ಎಲ್ಲೆಲ್ಲಿ ಯಾವುದೇ ಪೂರ್ವಾನುಮತಿಯಿಲ್ಲದೆ ಬೆಟ್ಟಗಳನ್ನು ಅಗೆದಿದ್ದಾರೂ ಆ ಎಲ್ಲಾ ಸ್ಥಳಗಳ ಸ್ಥಳಪರಿಶೀಲನೆ ನಡೆಸಿ ಅಂತಹ ಗುತ್ತಿಗೆದಾರರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ನಿಯಮಬಾಹಿರವಾಗಿ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರನ್ನು ಗುರುತಿಸಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕಲ್ಲದೆ ಅವರ ಕಾಮಗಾರಿ ಬಿಲ್ ತಡೆಹಿಡಿಯುವಂತೆ ಎಂ.ವಿ.ರಾಜೇಗೌಡ ಒತ್ತಾಯಿಸಿದ್ದಾರೆ.