ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ : ನಾಗಣ್ಣಾ ಪರೀಟ್

ಭಾಲ್ಕಿ: ಜೂ.6:ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಪರಿಸರದ ಉಳಿವಿಗೆ ಆದ್ಯತೆ ನೀಡುವುದರೊಂದಿಗೆ ಪರಿಸರ ರಕ್ಷಿಸುವ ಕಾರ್ಯವಾಗಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ನಾಗಣ್ಣಾ ಪರೀಟ್ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಸೋಮವಾರ ನಡೆದ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಭೂಮಿ ಮೇಲಿನ ಶುದ್ಧ ಗಾಳಿ, ನೀರು ರಕ್ಷಣೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು. ಪರಿಸರ ಉಳಿದರೆ ಮಾತ್ರ ಸಕಲ ಜೀವರಾಶಿಗಳ ಉಸಿರಾಡಲು ಸಾಧ್ಯವಿದೆ. ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಸುಂದರ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ಪುರಸಭೆ ಉಪಾಧ್ಯಕ್ಷ ಅಶೋಕ ಗಾಯಕವಾಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭೆಯ ಪರಿಸರ ಅಭಿಯಂತರ ಸಂಗಮೇಶ ಕಾರಬಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಪ್ರವೀಣ ಸಾವರೆ, ಮೆಹಬೂಬ್ ಸಾಬ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ, ಐಜಿಕ ಬಂಗಾರೆ, ಓಂಕಾರ ಮಜಕೂರೆ ಮತ್ತಿತರರು ಇದ್ದರು.