ಪರಿಸರ ರಕ್ಷಣೆ ಎಲ್ಲರ ಹೊಣೆ

ಮುಧೋಳ,ಮೇ30 : ಶ್ರೀಮಂತರು ವೈಭವದ ಬದುಕು ನಡೆಸುವುದಕ್ಕೆ ಪರಿಸರಕ್ಕೆ ಹೆಚ್ಚು ಹಾನಿ ಉಂಟು ಮಾಡುತ್ತಿದ್ದಾರೆ ಎಂದು ಆರೋಗ್ಯ ಅಧ್ಯಯನ ವರದಿಗಳು ಬಹಿರಂಗಪಡಿಸಿವೆ. ಶ್ರೀಮಂತರು ಹೆಚ್ಚು ವಾಹನ ಬಳಕೆ, ಹೆಚ್ಚು ನೀರಿನ ಬಳಕೆ ಮಾಡುತ್ತಿದ್ದಾರೆ. ಅವರು ಸರಳ ಜೀವನ ನಡೆಸಲು ಮುಂದಾಗಬೇಕು ಎಂದು ಪರಿಸರ ತಜ್ಞ ಡಾ.ಎಂ.ಆರ್.ದೇಸಾಯಿ ಹೇಳಿದರು.
ಅವರು ಮುಧೋಳ ಹೊರವಲಯದ ಡಾ.ಶಿವಾನಂದ ಕುಬುಸದ ಅವರ ಈಜುಕೊಳದ ಆವರಣದಲ್ಲಿ ಏರ್ಪಡಿಸಲಾಗಿದ್ದ ಸೋಲಾರ್ ವಿದ್ಯುತ್ ಬಳಕೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕರು ಪರಿಸರ ರಕ್ಷಣೆಗೆ ಸದಾ ಗಮನ ಕೊಡಬೇಕು. ಸೋಲಾರ್ ವಿದ್ಯುತ್ ಉತ್ಪಾದನೆ ಪರಿಸರ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೃಷಿ ನೀರಾವರಿಗೆ ಸೋಲಾರ್ ವಿದ್ಯುತ್ ಬಳಕೆ ಹೆಚ್ಚು ಉಪಯುಕ್ತವಾಗುವುದು ಎಂದು ಡಾ.ದೇಸಾಯಿ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹೆಸ್ಕಾಂ ಅಧಿಕಾರಿ ವಿ.ಎನ್.ಮರಕಟ್ಟಿ ಮಾತನಾಡಿ, ಸೋಲಾರ್ ವಿದ್ಯುತ್ ಘಟಕ ಅಳವಡಿಕೆಗೆ ಕೇಂದ್ರ ಸರ್ಕಾರ 30,000 ದಿಂದ 70,000 ರೂ.ವರೆಗೆ ಸಬ್ಸಿಡಿ ನೀಡುತ್ತದೆ. ಸೋಲಾರ್ ಘಟಕ ಜೋಡಣೆ ವ್ಯವಸ್ಥೆ ಬಹಳ ಸರಳಗೊಳಿಸಲಾಗಿದೆ. ಮೋಬೈಲ್ ಮೂಲಕ ಅರ್ಜಿ ಸಲ್ಲಿಸಿ ಒಪ್ಪಿಗೆ ಪಡೆಯಬಹುದು ಎಂದು ಹೇಳಿದರು.
ಟಾಟಾ ಸೋಲಾರ್ ಸಂಸ್ಥೆಯ ಅಧಿಕಾರಿ ಮೆಹಬೂಬ್ ಬೇಗ್ ಮಾತನಾಡಿ, ಟಾಟಾ ಸೋಲಾರ್ ಸಂಸ್ಥೆ ಗ್ರಾಹಕರ ಸ್ನೇಹಿ ಆಗಿದೆ. ಪರಿಣಿತ ಸಿಬ್ಬಂದಿ ಕೆಲಸ ಮಾಡುತ್ತಿದೆ. ಶ್ರೇಷ್ಠ ತಂತ್ರಜ್ಞಾನ ಅಳವಡಿಸಿ ಸೋಲಾರ್ ಉಪಕರಣಗಳನ್ನು ಉತ್ಪಾದಿಸುತ್ತಿದೆ ಎಂದು ವಿವರಿಸಿದರು.
ಸೋಲಾರ್ ಸಂಸ್ಥೆಯ ಪ್ರತಿನಿಧಿಗಳಾದ ಪಂಡಿತ ಹುನ್ನೂರ, ಶ್ರೀಕಾಂತ ಕೋಷ್ಠಿ, ಶ್ರೀನಿವಾಸ ಮಂಟೂರ ಮತ್ತು ಮಹಾಂತೇಶ ಮಾತನಾಡಿದರು.