ಪರಿಸರ ರಕ್ಷಣೆಯಿಂದ ಉತ್ತಮ ಆರೋಗ್ಯ ವೃದ್ಧಿ: ಹರೀಶ್ ಕುಮಾರ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ. 08- ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಮರ ಗಿಡಗಳನ್ನು ಬೆಳೆಸಿ, ಹಸಿರಿನ ವಾತಾವರಣ ನಿರ್ಮಾಣ ಮಾಡಿಕೊಟ್ಟರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ಶ್ರೀಕ್ಷೇತ್ರದ ಧರ್ಮ ಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಹರೀಶ್‍ಕುಮಾರ್ ತಿಳಿಸಿದರು.
ತಾಲೂಕಿನ ಬಿಸಲವಾಡಿ ಎಂಸಿಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹರದನಹಳ್ಳಿ ವಲಯ ಬಿಸಲವಾಡಿ ಕಾರ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬಿಸಿ ಟ್ರಸ್ಟ್ ವತಿಯಿಂದ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನೀರೆದು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪರಿಸರ ಮೇಲೆ ಅಕ್ರಮ ನಿರಂತರವಾಗಿ ನಡೆಯುತ್ತಿದೆ. ಮಾನವನ ಅತಿ ಆಸೆಯಿಂದಾಗಿ ಅರಣ್ಯ, ಬೆಟ್ಟ ಗುಡ್ಡಗಳು, ಮರ ಗಿಡಗಳು ಹಾಗೂ ನೀರಿನ ಸೆಲೆಗಳು ಹಾಳಾಗುತ್ತಿದೆ. ಈ ಬಗ್ಗೆ ಎಚ್ಚರ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಅಪತ್ತು ಕಾದಿದೆ. ದೆಹಲಿಯಲ್ಲಿ ಕೈಗಾರಿಕರಣದ ಪರಿಣಾಮ ದೆಹಲಿ ಪರಿಸರವೇ ನಾಶವಾಗಿದೆ. ಹೀಗಾಗಿ ಎಲ್ಲರು ಜಾಗೃತರಾಗಿ ಪರಿಸರ ಸಂರಕ್ಷಣೆಗೆ ಪಣತೊಡೋಣ. ನಮ್ಮ ಮನೆ ಸುತ್ತಮುತ್ತ ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಹವ್ಯಾಸವನ್ನು ರೂಡಿಸಿಕೊಳ್ಳೋಣ ಎಂದರು.
ಬಿಸಲವಾಡಿ ಮಹಾ ಒಕ್ಕೂಟದ ಅಧ್ಯಕ್ಷ ಎಂ. ರವಿ ಮಾತನಾಡಿ, ಅರಣ್ಯನಾಶದಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೈಗಾರಿಕೆಗಳು ಹಾಗೂ ನಗರೀಕರಣದ ಪರಿಣಾಮದಿಂದ ಹಳ್ಳಿಗಳ ಪರಿಸರ ಹಾಳಾಗುತ್ತಿದೆ. ಜಮೀನುಗಳು ನಿವೇಶನಗಳಾಗಿ ಪರಿವರ್ತನೆಯಾಗುತ್ತಿದೆ.
ಈ ನಿಟ್ಟಿನಲ್ಲಿ ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ನಮ್ಮ ಪೂರ್ವಿಕರು ಗ್ರಾಮದ ಮಖ್ಯ ದ್ವಾರ ಹಾಗೂ, ಕೆರೆ,ಕಟ್ಟೆ, ದೇವಸ್ಥಾನಗಳ ಮೈದಾನದಲ್ಲಿ ಅರಳಿ ಮರ, ಮೇವಿನ ಮರ ಸೇರಿದಂತೆ ಅನೇಕ ಆರೋಗ್ಯವೃದ್ದಿಸುವಂತಹ ಮರಗಳನ್ನು ಬೆಳೆಸುವ ಮೂಲಕ ಉತ್ತಮ ಗಾಳಿ, ನೆರಳು ಪಡೆದುಕೊಳ್ಳುತ್ತಿದ್ದರು. ಇದರಿಂದ ಗ್ರಾಮದ ಆರೋಗ್ಯವು ಸಹ ವೃದ್ದಿಸುತ್ತಿತ್ತು. ಈ ನಿಟ್ಟಿನಲ್ಲಿ ಮಕ್ಕಳು ಸಹ ತಮ್ಮ ಹುಟ್ಟು ಹಬ್ಬದ ದಿನದಂದು ಸಸಿಗಳನ್ನು ನೆಟ್ಟು ಬೆಳೆಸುವ ಉತ್ಸಾಹವನ್ನು ಬೆಳೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮಹದೇವ ಪ್ರಸಾದ್, ಕೃಷಿ ಮೇಲ್ವಿಚಾರಕರದ ಗೋವಿಂದಪ್ಪ, ಮೇಲ್ವಿಚಾರಕÀ ಶಶಿಕುಮಾರ್, ಶಿಕ್ಷಕ ವೃಂದದವರು, ಸೇವಾಪ್ರತಿನಿಧಿ ಶಿವಕುಮಾರ್ ಸಂಘದ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.