ಪರಿಸರ ಮಾಲಿನ್ಯ ತಡೆಗೆ ಸಾಮೂಹಿಕ ಪ್ರಯತ್ನ ಅಗತ್ಯ

ಕಲಬುರಗಿ,ಡಿ.1: ವಿವಿಧ ಮಾಲಿನ್ಯಗಳಿಂದ ಪರಿಸರ ತತ್ತರಿಸಿ ಹೋಗಿದೆ. ಮಾಲಿನ್ಯ ನಿಯಂತ್ರಣ ನೀತಿ-ನಿಯಮಗಳು, ಸರ್ಕಾರ, ಪರಿಸರ ಪ್ರೇಮಿಗಳಿಂದ ಮಾತ್ರ ಸಾಧ್ಯವಿಲ್ಲ. ಜೊತೆಗೆ ಎಲ್ಲೆಡೆ ವ್ಯಾಪಕವಾಗಿ ಗಿಡಗಳನ್ನು ನೆಟ್ಟು ಪೋಷಿಸುವುದು, ಸ್ವಚ್ಛತೆಯನ್ನು ಕಾಪಾಡುವುದು, ಪರಿಸರ ಸ್ನೇಹಿ ವಾತಾವರಣ ನಿರ್ಮಿಸುವ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ ಸಾಮೂಹಿಕ ಪ್ರಯತ್ನ ಅಗತ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ಕಮಲಾಪುರ ತಾಲೂಕಿನ ಭೂಷಣಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ರಾಷ್ಟ್ರೀಯ ಮಾಲಿನ್ಯ ನಿಯಂತ್ರಣಾ ದಿನಾಚರಣೆ’ಯ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಪರಿಸರ ಮಾಲಿನ್ಯ ತಡೆಗೆ ಪ್ಲಾಸ್ಟಿಕ್ ಬಳಕೆ ನಿಷೇಧ, ವನಮಹೋತ್ಸವ, ಜಲಮೂಲಗಳ ಸಂರಕ್ಷಣೆ, ನೀರಿನ ಮಿತ ಬಳಕೆ, ಇ-ತಾಜ್ಯ ಪುನರ್ಬಳಕೆ, ಆಹಾರ ಪದಾರ್ಥಗಳನ್ನು ಹಾಳಾಗದಂತೆ ಎಚ್ಚರವಹಿಸುವುದು, ನವೀಕರಿಸಬಹುದಾದ ಇಂಧನಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕಗೆ ಆದ್ಯತೆ, ವೈಯಕ್ತಿಕ ವಾಹನದ ಬದಲಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸುವುದು, ರಾಸಾಯನಿಕಗಳ ಬಳಕೆ ನಿಷೇಧಿಸುವುದು ಸೇರಿದಂತೆ ಅನೇಕ ಕ್ರಮಗಳನ್ನು ಅನುಸರಿಸುವ ಮೂಲಕ ಮಾಲಿನ್ಯವನ್ನು ತಡೆಗಟ್ಟಬಹುದಾಗಿದೆ ಎಂದರು.
ವಿಜ್ಞಾನ ಶಿಕ್ಷಕ ಮಲ್ಲಿಕಾರ್ಜುನ ಎಸ್.ಸಿರಸಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸುಮಿತಾದೇವಿ ವಗ್ಗೆ, ಶಿಕ್ಷಕರಾದ ಜಗನಾಥ ರಾಯಕೋಡ್, ಸೋಮಶೇಖರ ಮರಪಳ್ಳಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.