ಪರಿಸರ ಮಾಲಿನ್ಯ ತಡೆಗಾಗಿ ಗಿಡ-ಮರ ಬೆಳೆಸಿ

ಮಧುಗಿರಿ, ಜೂ. ೯- ನಮ್ಮ ಭೂಮಿ ನಮ್ಮ ಭವಿಷ್ಯ ಎಂದು ತುಮಕೂರಿನ ನೆಹರು ಯುವ ಕೇಂದ್ರ ಮತ್ತು ಶ್ರೀ ಕಲ್ಪವೃಕ್ಷ ಯುವ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಪರಮೇಶ್ ತಿಳಿಸಿದರು.
ಪಟ್ಟಣದ ಟಿವಿವಿ ಬಿಎಡ್ ಕಾಲೇಜಿನಲ್ಲಿ ಏರ್ಪಡಿಸಿದ್ದ ’ವಿಶ್ವ ಪರಿಸರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಮಾಲಿನ್ಯ ತಡೆಗಟ್ಟಲು ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪೋಷಿಸಿಸುವುದು ಅವಶ್ಯ. ಪರಿಸರ ಉಳಿಸಿ, ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಸಹ ಪ್ರಾಧ್ಯಾಪಕ ಶಿವಾನಂದ್ ಬಿ. ಮಾತನಾಡಿ, ಗಿಡ ನೆಟ್ಟು ಖುಷಿಪಡುವ ದಿನ ಘೋಷ ವಾಕ್ಯದೊಂದಿಗೆ ಪರಿಸರ ಸಂರಕ್ಷಣೆ, ಭೂಮಿಯ ಮರು ಸ್ಥಾಪನೆ ಅವಶ್ಯಕತೆ ಬಗ್ಗೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪ್ರೊ.ಮ.ಲ.ನ. ಮೂರ್ತಿ ಮಾತನಾಡಿ, ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದರು.
ನಿವೃತ್ತ ಪ್ರಾಂಶುಪಾಲರಾದ ಡಾ. ನಾಗರಾಜ ಜಿ.ಪಿ. ಮಾತನಾಡಿ, ಪರಿಸರ ದಿನಾಚರಣೆ ನಿರಂತರವಾಗಿರಬೇಕೆ ಹೊರತು ಜೂನ್ ೫ಕ್ಕೆ ಮಾತ್ರ ಸೀಮಿತವಾಗಿರಬಾರದು. ಪರಿಸರದಲ್ಲಿ ಮಾನವ ಒಂದು ಭಾಗ. ಅಭಿವೃದ್ಧಿ, ಆಸೆ, ಆಕಾಂಕ್ಷೆಗಳಿಗೆ ಪರಿಸರವನ್ನು ನಾಶ ಮಾಡದೆ, ಆರಣ್ಯಾಭಿವೃದ್ಧಿಗೆ ಆಧ್ಯತೆ ನೀಡಿ. ಸಾವಯವ, ಕಾಂಪೋಸ್ಟ್ ಗೊಬ್ಬರ ಬಳಸುವ ಮೂಲಕ ಪರಿಸರ ಸಂರಕ್ಷಣೆ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಾದ ಪ್ರಕಾಶ್, ಕೆಂಪರಾಜು, ಗ್ರಂಥಪಾಲಕ ನಾಗಭೂಷಣ್ ಮತ್ತಿತರರು ಉಪಸ್ಥಿತರಿದ್ದರು.
ಶುಭ ಮತ್ತು ಸಂಗಡಿಗರು ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಎಂ. ಆರ್. ವೆಂಕಟೇಶ್‌ಮೂರ್ತಿ ಸ್ವಾಗತಿಸಿದರು. ಉಪನ್ಯಾಸಕಿ ಬಿ.ಜೆ. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.