ಪರಿಸರ ಪ್ರಜ್ಞೆ ಸರ್ವರಲ್ಲಿ ಜಾಗೃತಗೊಳ್ಳಲಿ:ಪ್ರಾಚಾರ್ಯ ಶ್ರೀಕಾಂತ ಕೆ.ಎಸ್.

ಸಂಜೆವಾಣಿ ವಾರ್ತೆ,
ವಿಜಂಯಪುರ,ಜೂ.6:ಭಾರತೀಯ ಜನ ಜೀವನದಲ್ಲಿ ಪ್ರಕೃತಿ ಪ್ರೇಮ ಹಾಸು ಹೊಕ್ಕಾಗಿದೆ. ಗಿಡ-ಮರ, ಬೆಟ್ಟ-ಗುಡ್ಡ, ಪ್ರಾಣಿ-ಪಕ್ಷಿ, ಹೊಳೆ-ಹಳ್ಳ ಸೂರ್ಯ-ಚಂದ್ರ ಗಾಳಿಯಲ್ಲಿ ದೈವತ್ವವನ್ನು ಕಂಡವರು. ಪ್ರತಿಯೊಬ್ಬರೂ ಕೂಡ ತಾವು ವಾಸಿಸುವ ಸ್ಥಳದ ಸುತ್ತಮುತ್ತ ಪರಿಸರ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಇದು ಒಬ್ಬರಿಂದಾಗದ ಕಾರ್ಯ. ಸರ್ವರಲ್ಲೂ ಪರಿಸರ ಕಾಳಜಿ ಜಾಗೃತಗೊಂಡರೆ ಪ್ರಕೃತಿ ವಿಕೋಪಗಳಾಗುವುದಿಲ್ಲ ಎಂದು ಎಕ್ಸಲಂಟ್ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್. ಹೇಳಿದರು.
ವಿಜಯಪುರ ನಗರದ ಕೆ.ಎಸ್.ಆರ್.ಟಿ.ಸಿ ಕಾಲನಿಯಲ್ಲಿರುವ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನೋತ್ಸವದ ಅಂಗವಾಗಿ ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧವಾಗಬೇಕು. ಪ್ರತಿದಿನ ಕಸ ವಿಲೇವಾರಿ ಮಾಡಬೇಕು. ಅತಿ ಕಾರ್ಬನ್ ಹೊರ ಹಾಕುವ ವಾಹನ ಬಳಸದೇ ಸೈಕಲ್ ಸವಾರಿ ಮಾಡಬೇಕು. ಪರಿಸರದ ಬಗ್ಗೆ ನಿಷ್ಕಾಳಜಿ ತೋರಿದರೆ ಹವಾಮಾನ ವೈಪರಿತ್ಯವಾಗಿ ಜಗತ್ತು ತಲ್ಲಣಗೊಳ್ಳುತ್ತದೆ. ಹೀಗಾಗಿ ಮರ ನೆಟ್ಟು ವಿದ್ಯಾರ್ಥಿಗಳ ದೆಸೆಯಿಂದಲೇ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕೆಂದು ನುಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಸ್.ಆರ್. ಪಾಟೀಲ, ಮಂಜುನಾಥ ನಿಂಬಿಕಾಯಿ, ಎಚ್.ಬಿ. ಬಿರಾದಾರ, ಗುರುರಾಜ ಕೌಲಗಿ, ಸಿದ್ದಾರ್ಥ ಹುಬ್ಬಳ್ಳಿ, ಕವನಾ, ಮಂಜುನಾಥ ಬಾಲಗಾಂವ, ಮುಂತಾದವರು ಉಪಸ್ಥಿತರಿದ್ದರು.