ಪರಿಸರ ನಾಶದಿಂದ ಮನುಕುಲಕ್ಕೆ ಅಪಾಯ:ಡಿ.ವಿ. ಪರಮಶಿವಮೂರ್ತಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ6: ಪರಿಸರದ ವಿಕಾಸದ ವಿರುದ್ಧ ದಿಕ್ಕಿನಲ್ಲಿ ಮಾನವ ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದು ಹೀಗೆ ಮುಂದುವರೆದರೆ ಮನುಕುಲಕ್ಕೆ ಅಪಾಯ ತಪ್ಪಿದಲ್ಲ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಕನ್ನಡ ವಿಶ್ವವಿದ್ಯಾಲಯದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರವನ್ನು ಮರೆತರೇ ಮಾನವ ಸಂಕುಲ ಬದುಕಲು ಸಾಧ್ಯವಿಲ್ಲ. ಮಾನವ ಪರಿಸರದ ವಿನಾಶದ ವಿರುದ್ಧ ದಿಕ್ಕಿನಲ್ಲಿಯೇ ಹೆಚ್ಚು ಸಾಗುತ್ತಿದ್ದಾನೆ. ಅದು ಮುಂದಿನ ಭವಿಷ್ಯದಲ್ಲಿ ಮಾನವ ಸಂಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕಳವಳ ವ್ಯಕ್ತ ಪಡಿಸಿದರು.
ನಾವು ಮುಂದಿನ ಮನುಷ್ಯ ಸಂಕುಲದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟಕೊಂಡು ಈಗಿನಿಂದ ಸ್ವಯಂ ಪ್ರೇರಿತರಾಗಿ ಪರಿಸರದ ಉಳಿವಿಗಾಗಿ ಹಾಗೂ ಒಳತಿಗಾಗಿ ಶ್ರಮ ಪಡಬೇಕಾಗಿದೆ. ಇಂತಹ ಪರಿಸರದ ದಿನಾಚರಣೆಗಳನ್ನು ದಿನಾಚರಣೆಯಾಗಿ ಆಚರಿಸದೆ ಪ್ರತಿದಿನ ಪರಿಸರ ಕಾಳಜಿ ಮಾಡುವ ಮೂಲಕ ನಾವು ಹಸಿರನ್ನು ಉಳಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಹಾಗೂ ಜವಾಬ್ದಾರಿಯುತರಾಗಿ ಬದುಕಬೇಕಿದೆ ಎಂದರು.
ತೋಟಗಾರಿಕೆ ವಿಭಾಗದ ಸಹಾಯಕ ಕುಲಸಚಿವ ಎಮ್.ಎಮ್. ಶಿವಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಡಾ. ಎ. ಸುಬ್ಬಣ್ಣ ರೈ. ಸಹಾಯಕ ತೋಟಗಾರಿಕ ಅಧಿಕಾರಿ ಬೀರಪ್ಪ, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಅಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.