ಪರಿಸರ ದಿನಾಚರಣೆ ಧನಾತ್ಮಕ ಬದಲಾವಣೆಗೆ ಪ್ರೇರಣೆ: ಪ್ರೊ. ಕಾಂಬಳೆ

ಕಲಬುರಗಿ, ಜೂ 05 : ವಿಶ್ವ ಪರಿಸರ ದಿನವು ಜಾಗತಿಕ ಮಟ್ಟದಲ್ಲಿ ಧನಾತ್ಮಕ ಬದಲಾವಣೆ ಮತ್ತು ಮಾನವನ ಬೆಳವಣಿಗೆಗೆ ಪ್ರೇರಣೆಯನ್ನು ನೀಡಲಿದೆ. ಮಾನವ ಸಂಕುಲದ ಆರೋಗ್ಯಕರ ಜೀವನ ಮುಂದುವರಿಕೆಗೆ ಪರಿಸರವೇ ಮೂಲವಾಗಿದ್ದು ಅದರ ಉಳಿವು ಮತ್ತು ಸಂರಕ್ಷಣೆಗೆ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ವಿ. ಟಿ. ಕಾಂಬಳೆ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲದ ದೈಹಿಕ ಶಿಕ್ಷಣ ವಿಭಾಗ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಹಾಗೂ ಕುಸನೂರು ಗ್ರಾಮ ಪಂಚಾಯ್ತಿ ಇವುಗಳ ಸಹಯೋಗದಲ್ಲಿ ಆಯೋಜಿಸಿದ ‘ವಿಶ್ವಪರಿಸರ ದಿನಾಚರಣೆ’ ಅಂಗವಾಗಿ ದೈಹಿಕ ಶಿಕ್ಷಣ ವಿಭಾಗದ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭೂಮಿ ಉಳಿಯಬೇಕಾದರೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶಾಸ್ವತವಾಗಿ ಸಂರಕ್ಷಣೆ ಮಾಡಬೇಕಿದೆ. ಪರಿಸರದ ಉಳಿವಿನಿಂದ ಮಾತ್ರ ಜಗತ್ತು ಸುಸ್ಥಿರವಾಗಿ ಅಭಿವೃದ್ದಿ ಸಾಧಿಸಲು ಸಾಧ್ಯವಿದೆ. ಆದರಿಂದ ಸಮೃದ್ಧ ಪರಿಸರವೇ ಮಾನವ ಜೀವನದ ಬೆಳವಣಿಗೆಯನ್ನು ನಿರ್ಧರಿಸುತ್ತದೆ ಎಂದರು.
ಕುಲಸಚಿವ ಡಾ. ಬಿ. ಶರಣಪ್ಪ ಮಾತನಾಡಿ ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ಪರಿಸರ ಸಂರಕ್ಷಣೆ, ಪರಿಸರ ಕಾಳಜಿ ಮತ್ತು ಪರಿಸರ ಜಾಗೃತಿ ಮೂಡಿಸುವ ಮಹತ್ವದ ಅಂಶಗಳನ್ನು ಅಳವಡಿಸಲಾಗಿದೆ. ಅದರಂತೆ ಪರಿಸರದ ಬಗೆಗಿನ ಪ್ರೀತಿ ಮತ್ತು ಪರಿಸರ ಸ್ನೇಹಿಯಾಗಿ ಕಾರ್ಯಕ್ರಮ ಆಯೋಜಿಸುವ ಮೂಲಕ ಯುವ ಸಮೂಹಕ್ಕೆ ಅರಿವು ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಎಲ್ಲರೂ ಭಾಗವಹಿಸಿರುವುದು ಅರ್ಥಪೂರ್ಣವಾಗಿದೆ. ಮುಂದಿನ ದಿನಗಳಲ್ಲಿ ಕ್ಯಾಂಪಸ್ ಆವರಣದಲ್ಲಿ ಹಸಿರುವನ ನಿರ್ಮಾಣ ಮಾಡುವ ಮೂಲಕ ಪರಿಸರ ಉಳಿವಿಗೆ ಹೆಚ್ಚು ಒತ್ತು ನೀಡುವುದು ಅಗತ್ಯವಿದೆ ಎಂದರು.
ಕುಸನೂರು ಗ್ರಾಮ ಪಂಚಾಯ್ತಿ ಕಾರ್ಯನಿರ್ವಾÀಹಕ ಅಧಿಕಾರಿ ಹೇಮಲತಾ ದೇಶಮುಖ್ ಮಾತನಾಡಿ ಇಂದಿನ ದಿನಮಾನಗಳಲ್ಲಿ ಜಾಗತಿಕ ತಾಪಮಾನ ವೈಪರೀತ್ಯ ಮತ್ತು ಪ್ರತಿಕೂಲತೆಯನ್ನು ಅರಿತುಕೊಂಡು ನಾಗರೀಕ ಸಮುದಾಯ ಸಸಿ ನೆಡುವ ಮೂಲಕ ಪರಿಸರ ಉಳಿಯುವಿಕೆಗೆ ಪ್ರೋತ್ಸಾಹಿಸಬೇಕಿದೆ. ಪರಿಸರವೇ ಮನುಕುಲದ ಉಸಿರು ಎಂಬ ಆಶಯವನ್ನು ಯಶಸ್ವಿಗೊಳಿಸಲು ಎಲ್ಲರೂ ಎಲ್ಲಡೆ ಶ್ರಮಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ದಮ್ಮ ಪ್ರಕಾಶ್, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ. ಎನ್ ಜಿ. ಕಣ್ಣೂರು, ಕುಸನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಂಗಮ್ಮ ಅಮೃತ್ತ ರಾವ್ ಪಾಟಿಲ್, ಸದಸ್ಯರಾದ ರೂಪ ಶಿವಲಿಂಗ ಸಾವಳಗಿ, ಕುಪೇಂದ್ರ ಬರಗಾಲಿ, ಶಿವರಾಜ ಮಕ್ಕೊಂಡಿ, ರೇಷ್ಮ ಶರಣು ಹಗರಗುಂಡಿಗೆ ವಿಶ್ವವಿದ್ಯಾಲಯದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಹಾಗೂ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು ಸಾಮೂಹಿಕವಾಗಿ ಸಸಿಗಳನ್ನು ನೆಡುವ ಮೂಲಕ ಭಾಗವಹಿಸಿದರು.