ಪರಿಸರ ಕಾಳಜಿ ಎಲ್ಲರ ಕರ್ತವ್ಯ

ಲಕ್ಷ್ಮೇಶ್ವರ, ಜೂ6: ಮಾನವ ಪರಿಸರ ಜೀವಿ. ಮನುಷ್ಯ ಬದುಕಲು ಅನಿವಾರ್ಯವಾಗಿರುವ ಮೂಲ ಅವಶ್ಯಕಗಳು ಸಿಗುವುದು ಪರಿಸರದಿಂದ. ಹೀಗಾಗಿ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಗೊಜನೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲ್ಲವ್ವ ಈಶ್ವರಗೌಡ ಪಾಟೀಲ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಶನಿವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗಿಡ ನೆಟ್ಟು ಅವರು ಮಾತನಾಡಿದರು. ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಕೆಲಸವಲ್ಲ ಅದು ಭೂಮಿಯ ಮೇಲೆ ಜೀವಿಸುತ್ತಿರುವ ಎಲ್ಲರ ಕೆಲಸವಾಗಿದೆ. ಪ್ರತಿಯೊಬ್ಬರು ಮನೆಯ ಸುತ್ತಲಿನ ಖಾಲಿ ಜಾಗೆಯಲ್ಲಿ ಸ್ವಯಂ ಪ್ರೇರಿತರಾಗಿ ಗಿಡ, ಮರಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿ ಹೊತ್ತುಕೊಳ್ಳುವುದು ಇಂದಿನ ಅನಿವಾರ್ಯವಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಮಾಳವಾಡ ಅವರು ಮಾತನಾಡಿ, ‘ಪರಿಸರ ವ್ಯವಸ್ಥೆ ಪುನರ್ ಸ್ಥಾಪನೆ’ ಎಂಬುದು 2021ನೇ ವರ್ಷದ ವಿಶ್ವ ಪರಿಸರ ದಿನದ ಧ್ಯೇಯ ವಾಕ್ಯವಾಗಿದೆ. ಈ ಬಗ್ಗೆ ಗ್ರಾಮದ ಜನರಲ್ಲಿ ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಮೂಲಕ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಅವರನ್ನು ಭಾಗವಹಿಸುವಂತೆ ಮಾಡಬೇಕಾಗಿದೆ ಎಂದರು.
ತಾಪಂ ಐಇಸಿ ಸಂಯೋಜಕ ವೀರೇಶ ಬಸನಗೌಡ್ರ ಮಾತನಾಡಿ, ನಮ್ಮ ದೈನದಿಂದ ಬದುಕಿನಲ್ಲಿ ನಾವು ಹಲವು ಕಾನೂನುಗಳನ್ನು ಪಾಲಿಸುತ್ತೇವೆ. ಅದೇ ರೀತಿ ಪರಿಸರ ಸಂರಕ್ಷಣೆ ದೃಷ್ಟಿಯಿಂದ ವೈಯಕ್ತಿಕ ಕಾನೂನುಗಳ ಪಾಲಿಸಲು ಮುಂದಾಗಬೇಕು. ಮರ ಕಡಿಯುವುದಿಲ್ಲ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದಿಲ್ಲ, ನೈಸರ್ಗಿಕ ಸಂಪನ್ಮೂಲ ವ್ಯರ್ಥ ಮಾಡುವುದಿಲ್ಲ ಹೀಗೆ ಪರಿಸರ ಕಾಳಜಿಯ ಸಂಕಲ್ಪಗಳನ್ನು ನಾವೇ ಅಳವಡಿಸಿಕೊಂಡು ಪಾಲಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಶೀಲವ್ವ ತಳವಾರ, ಸದಸ್ಯರಾದ ದ್ಯಾಮವ್ವ ನಿಂಗಪ್ಪ ಮೆಣಸಿನಕಾಯಿ, ಗೀತಾ ಮಹಾಂತೇಶ ಪುರದ, ಮಂಜುನಾಥ ನಾಗಪ್ಪ ಚಲವಾದಿ, ನೀಲಪ್ಪ ಬಸವಣ್ಣೆಪ್ಪ ಗುಡ್ಡಣ್ಣವರ, ಮಹಾಂತಗೌಡ ಶಂಕರಗೌಡ ಪಾಟೀಲ, ಗಂಗಾಧರ ಕರಿನಿಂಗಣ್ಣವರ, ನೀಲವ್ವ ಹರಿಜನ, ಫಾತಿಮಾ ಮುಲ್ಲಾನವರ, ಮಾಂತಪ್ಪ ಹರಿಜನ, ಪುಟ್ಟವ್ವ ಲಮಾಣಿ, ಚಿನ್ನಕ್ಕ ಲಮಾಣಿ ಗ್ರಾಮದ ಇತರರು ಪಾಲ್ಗೊಂಡಿದ್ದರು.