
ಕೋಲಾರ,ಆ ೯- ಪರಿಸರ ಉಳಿದರೆ ಮಾತ್ರ ನಮ್ಮ ಉಳಿವು ಸಾದ್ಯ ಎಂಬುವುದನ್ನು ಪ್ರತಿಯೊಬ್ಬರು ಮನಗಾಣಬೇಕು ಎಂದು ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಕರೆ ನೀಡಿದರು.
ನಗರ ಹೊರವಲಯದ ಅಂತರಗಂಗೆ ಬೆಟ್ಟದಲ್ಲಿ ಶ್ರೀ ವಾಸವಿ ಸೇವಾ ಸಮಿತಿಯ ಸ್ನೇಹಿತರ ದಿನಾಚರಣೆ ಮತ್ತು ಅದಮ್ಯ ಚೇತನ ಸಂಸ್ಥೆಯ ಅಮೋಘ ೩೯೭ನೇ ಹಸಿರು ಭಾನುವಾರ ಪ್ರಯುಕ್ತ ಕೋತಿಗಳ ಆಹಾರಕ್ಕಾಗಿ ೫೦ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ಉಳಿವಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು. ಗಿಡಗಳಿಂದಾಗುವ ಪ್ರಯೋಜನಗಳು, ಪ್ಲಾಸ್ಟಿಕ್‌ನಿಂದ ಆಗುವ ಪರಿಸರ ನಾಶದ ಬಗ್ಗೆ ಮೊದಲು ನಾವು ತಿಳಿದುಕೊಳ್ಳಬೇಕು ಮತ್ತು ಇತರಿಗೆ ಜಾಗೃತಿ ಮೂಡಿಸುಂತಹ ಕೆಲಸವನ್ನು ಮಾಡಬೇಕೆಂದು ಸ್ಫೂರ್ತಿ ತುಂಬಿದರು.
ಇದೇ ಸಂದರ್ಭದಲ್ಲಿ ತೇಜಸ್ವಿನಿ ಅನಂತಕುಮಾರ್ ರವರಿಗೆ ಸಮಿತಿಯ ಮಹಿಳಾ ಸದಸ್ಯರು ಸ್ನೇಹ ಬಂಧ ಕಟ್ಟಿ ಸ್ನೇಹಿತರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.
ಶ್ರೀ ವಾಸವಿ ಸೇವಾ ಸಮಿತಿಯ ಅಧ್ಯಕ್ಷ ಲಯನ್ ಶಿವ ಶೇಖರ್ ಸ್ವಾಗತಿಸಿ ಸ್ನೇಹಿತರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿ ಪರಿಸರಕ್ಕೆ ಸ್ನೇಹಿತರಾಗೋಣ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶ್ರೀ ವಾಸವಿ ಸೇವಾ ಸಮಿತಿಯ ಕಾರ್ಯದರ್ಶಿ ಬಿ.ಎನ್. ನಾಗೇಶ್, ಖಜಾಂಚಿ ವಸಂತ್‌ಕುಮಾರ್, ಸಮಿತಿಯ ಸದಸ್ಯರ ಕುಟುಂಬಗಳು, ಅದಮ್ಯ ಚೇತನದ ಸ್ವಯಂ ಸೇವಕರು, ಅಂತರಗಂಗೆ ವಾಕಿಂಗ್ ಫ್ರೆಂಡ್ಸ್, ಸಮಾನ ಮನಸ್ಕ ಗೆಳೆಯರು, ಅರಣ್ಯ ಇಲಾಖೆಯ ಮಂಜುನಾಥ್, ಹರೀಶ್ ಮುಂತಾದವರು ಭಾಗವಹಿಸಿ ಸ್ನೇಹ ಬಂಧ (ಫ್ರೆಂಡ್ ಶಿಫ್ ಬ್ಯಾಂಡ್) ಕಟ್ಟುವ ಮೂಲಕ ಸ್ನೇಹಿತರ ದಿನಾಚರಣೆಯ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.