ಪರಿಸರಸ್ನೇಹಿ ಗೋಮಯ ರಾಖಿಗೆ ಬಹು ಬೇಡಿಕೆ

ನಾಗರಾಜ ಹೂವಿನಹಳ್ಳಿ
ಕಲಬುರಗಿ,ಆ.1-ಪ್ಲಾಸ್ಟಿಕ್ ನ ಅತಿಯಾದ ಬಳಕೆಯಿಂದ ಮಾನವನ ದೇಹಕ್ಕೆ, ಪರಿಸರಕ್ಕೆ ಮತ್ತು ಪ್ರಾಣಿಗಳ ಜೀವಕ್ಕೆ ಅಪಾರವಾದ ಹಾನಿಯನ್ನು ನಾವು ತಿಳಿದೋ, ತಿಳಿಯದೆಯೋ ಮಾಡುತ್ತಿದ್ದೇವೆ. ಮಾನವ ಕುಲಕ್ಕೆ ಮಾತ್ರವಲ್ಲದೆ, ಜೀವ ಸಂಕುಲಕ್ಕೆ ಅಪಾರವಾದ ಹಾನಿಯನ್ನುಂಟು ಮಾಡಬಲ್ಲ ಪ್ಲಾಸ್ಟಿಕ್ ಬಳಕೆಗೆ ಎಷ್ಟು ಸಾಧ್ಯವೋ ಅಷ್ಟು ಕಡಿವಾಣ ಹಾಕಲು ಎಲ್ಲರೂ ಪ್ರಯತ್ನಿಸಬೇಕಿದೆ. ಈ ನಿಟ್ಟಿನಲ್ಲಿ ಕಲಬುರಗಿ ತಾಲ್ಲೂಕಿನ ಗರೂರ (ಬಿ) ಗ್ರಾಮದ ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದುದ್ದಾಗಿದೆ.
ಪ್ರತಿವರ್ಷ ಆಚರಿಸುವ ರಕ್ಷಾಬಂಧನ ಹಬ್ಬಕ್ಕೆ ಪ್ಲಾಸ್ಟಿಕ್ ಬಳಸಿ ತಯಾರಿಸುವ ರಾಖಿ ಮಾರುಕಟ್ಟೆಗೆ ಬರುತ್ತವೆ. ರಕ್ಷಾ ಬಂಧನ ಮುಗಿದ ಮೇಲೆ ಅವುಗಳನ್ನು ತಾಜ್ಯದೊಂದಿಗೆ ಎಸೆಯಲಾಗುತ್ತದೆ. ಆಹಾರ ಅರಸುತ್ತ ಬರುವ ಪಶು, ಪಕ್ಷಿ, ಪ್ರಾಣಿಗಳು ಆಹಾರದ ಜೊತೆಗೆ ಪ್ಲಾಸ್ಟಿಕ್ ಕೂಡ ತಿಂದು ಸಾಕಷ್ಟು ನೋವು ಅನುಭವಿಸಿ ಜೀವ ಕಳೆದುಕೊಳ್ಳುತ್ತವೆ. ಇದನ್ನು ತಪ್ಪಿಸಲೆಂದೇ ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆ ಅಧ್ಯಕ್ಷ ಶಿವರಾಜಕುಮಾರ ಎನ್.ಹಳ್ಳಿ ಅವರು ಕಳೆದ ಎರಡು ವರ್ಷಗಳಿಂದ ಗೋಮಯ (ಗೋವಿನ ಸಗಣಿ) ಬಳಸಿ ಪರಿಸರ ಸ್ನೇಹಿಯಾದ ರಾಖಿಗಳನ್ನು ತಯಾರಿಸಿ ಮಾರಾಟ ಮಾಡುವುದರ ಮೂಲಕ ಪರಿಸರ ರಕ್ಷಣೆ ಮಾಡುತ್ತಿದ್ದಾರೆ.
ಕಳೆದ ವರ್ಷ ಅವರು ಸುಮಾರು 4,500 ಪರಿಸರ ಸ್ನೇಹಿ ರಾಖಿ ಮಾರಾಟ ಮಾಡಿದ್ದಾರೆ. ಈ ವರ್ಷ ಬೇಡಿಕೆ ಹೆಚ್ಚಿದ್ದರಿಂದ ಸುಮಾರು 10 ಸಾವಿರ ಪರಿಸರ ಸ್ನೇಹಿ ರಾಖಿ ಮಾರಾಟವಾಗುವ ಸಾಧ್ಯತೆ ಇದೆ.
ಕಳೆದ 4-5 ತಿಂಗಳಿಂದ ಸಂಸ್ಥೆಯಲ್ಲಿ ಪರಿಸರ ಸ್ನೇಹಿ ರಾಖಿ ತಯಾರಿಸುವ ಕೆಲಸ ಮಾಡಲಾಗುತ್ತಿದೆ. ಕಲಬುರಗಿ ಮಾತ್ರವಲ್ಲದೆ ಬೀದರ್, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೂ ಬೇಡಿಕೆಗನುಸಾರ ಕೋರಿಯರ್ ಮುಖಾಂತರ ಪರಿಸರ ಸ್ನೇಹಿ ರಾಖಿಗಳನ್ನು ಕಳುಹಿಸಲಾಗುತ್ತಿದೆ ಎನ್ನುತ್ತಾರೆ ಸಂಸ್ಥೆ ಅಧ್ಯಕ್ಷ ಶಿವರಾಜಕುಮಾರ ಎಸ್.ಹಳ್ಳಿ ಅವರು.
ಗೋವಿನ ಸಗಣಿಯಿಂದ ಕುಳ್ಳು ಬಡಿದು ಅದನ್ನು ಒಣಗಿಸಿ ಪೌಡರ್ ಮಾಡಿ ಜರಡಿ ಹಿಡಿಯಲಾಗುತ್ತದೆ. ನಂತರ ಅದಕ್ಕೆ ಗವರ್ ಗಮ್ ನೀರು ಬೆರೆಸಿ ಹದ ಮಾಡಿ ವಿವಿಧ ಆಕಾರದ ರಾಖಿಗಳನ್ನು ಸಿದ್ಧಪಡಿಸಲಾಗುತ್ತದೆ. ಆ ನಂತರ ಅದನ್ನು ಒಣಗಿಸಿ ಪೂಜಾ ಕಾರ್ಯಗಳಲ್ಲಿ ಬಳಸುವ ದಾರಗಳನ್ನು ಕಟ್ಟಲಾಗುತ್ತದೆ ಎಂದು ಶಿವರಾಜಕುಮಾರ ಪರಿಸರ ಸ್ನೇಹಿ ರಾಖಿ ತಯಾರಿಕೆಯ ಬಗ್ಗೆ ವಿವರಣೆ ನೀಡಿದರು.
ಎಂ.ಎಸ್.ಎ.ಪದವೀಧರರಾದ ಶಿವರಾಜಕುಮಾರ ಅವರು, ಕೇವಲ ಪರಿಸರ ಸ್ನೇಹಿ ರಾಖಿ ಮಾತ್ರವಲ್ಲದೆ ಗೋಮಯ ಧೂಪಬತ್ತಿ, ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾರೆ. ಇದರ ಜೊತೆಗೆ ಶಾಲಾ-ಕಾಲೇಜುಗಳಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ರಾಖಿ, ಗಣಪತಿ ಮೂರ್ತಿ ತಯಾರಿಕೆಯ ಬಗ್ಗೆಯೂ ತರಬೇತಿ ನೀಡುತ್ತಿದ್ದಾರೆ.
ಕಳೆದ ವರ್ಷ ಪರಿಸರ ಸ್ನೇಹಿ ರಾಖಿಗೆ 5 ರೂಪಾಯಿ ಬೆಲೆ ನಿಗದಿ ಪಡಿಸಲಾಗಿತ್ತು. ಈ ವರ್ಷ 10 ರೂಪಾಯಿ ಬೆಲೆ ನಿಗದಿ ಪಡಿಸಲಾಗಿದೆ. ವಿವಿಧ ಆಕಾರದ ರಾಖಿಗಳನ್ನು ಈಗಾಗಲೆ ಸಿದ್ಧಪಡಿಲಾಗಿದ್ದು ಆಸಕ್ತರು ನಗರದಲ್ಲಿರುವ ಸ್ವದೇಶಿ ಕೇಂದ್ರಗಳಿಗೆ ಭೇಟಿ ನೀಡಿ ರಾಖಿ ಖರೀದಿಸಬಹುದಾಗಿದೆ.
ಈ ಪರಿಸರ ಸ್ನೇಹಿ ರಾಖಿಯ ಮೇಲ್ಭಾಗದಲ್ಲಿ ತುಳಸಿ ಅಥವಾ ಈರುಳ್ಳಿ ಬೀಜಗಳನ್ನು ಹಚ್ಚಲಾಗಿದೆ. ರಕ್ಷಾಬಂಧನ ಮುಗಿದ ಮರುದಿನ ರಾಖಿಯು ಎಲ್ಲಿಯು ಎಸೆದರು ರಾಖಿವು ಕ್ರಮೇಣವಾಗಿ ಕರಗಿ ಗೊಬ್ಬರವಾಗಿ ತುಳಸಿ ಅಥವಾ ಈರುಳ್ಳಿ ಸಸ್ಯ ಬೆಳೆಯುತ್ತದೆ ಹೊರೆತು ಪರಿಸರಕ್ಕೆ ಯಾವುದೇ ರೀತಿ ಹಾನಿಯಾಗುದಿಲ್ಲ. ಜೊತೆಗೆ ಮಂದಹಾಸ ವೃಕ್ಷ ಕಿಟ್‍ನ್ನು ಸಹ ತಯ್ಯಾರಿಸಲಾಗುತ್ತಿದೆ. ಈ ಕಿಟ್‍ನಲ್ಲಿ ಗೋವಿನ ಸೆಗಣಿಯಿಂದ ತಯ್ಯಾರಿಸಿರುವ ಬುಟ್ಟಿ, ಗೋಮಯ ರಾಖಿ, ಮಣ್ಣು, ಎರೆಹುಳ ಗೊಬ್ಬರ, ಕೋಕೋಪಿಟ್, ಸಸ್ಯದ ಬೀಜಗಳು, ಸಸ್ಯದ ಬೋರ್ಡ ಹಾಗೂ ಅಕ್ಕಿ ಮತ್ತು ಕುಂಕುಮ ಇಡಲಾಗಿದೆ ಎಲ್ಲವೂ ಪರಿಸರ ಸ್ನೇಹಿಯಾಗಿದ್ದು ಹತ್ತಿರದ ಸ್ವದೇಶಿ ಕೇಂದ್ರಗಳಲ್ಲಿ ಇವುಗಳನ್ನು ಕೊಂಡುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿವರಾಜಕುಮಾರ ಎನ್.ಹಳ್ಳಿ ಅವರನ್ನು ಸಂಪರ್ಕಿಸಬಹುದಾಗಿದೆ. ಮೋ : 8095007278, 7259128278.