ಪರಿಸರಸ್ನೇಹಿ ಗಣೇಶ ಪ್ರತಿಷ್ಠಾಪನೆಗೆ ಹೆಚ್ಚಿದ ಒಲವು

ಕಲಬುರಗಿ ಆ 30 : ನಾಳಿನ ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ.
ನಮ್ಮೆಲ್ಲರ ನೆಚ್ಚಿನ ಆರಾಧ್ಯ ದೈವ ಗಣೇಶ ನಮ್ಮ ಮನೆ ಮನಗಳನ್ನ ಅಲಂಕರಿಸಲು ಸಿದ್ಧವಾಗಿದ್ದಾನೆ. ಜನರ ಸಡಗರಕ್ಕೆ ಇಂಬು ನೀಡಲು ಮಾರುಕಟ್ಟೆಯೂ ಸಜ್ಜಾಗಿದೆ.ವಿವಿಧ ಗಣೇಶ ವಿಗ್ರಹಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಜನರಲ್ಲಿ ಆಸಕ್ತಿ ಉಂಟಾಗಿದೆ.ಆದ್ದರಿಂದ ಈ ಸಲ ನಗರದ ಸ್ವದೇಶಿ ಕೇಂದ್ರಗಳು ಸೇರಿದಂತೆ ಹಲವು ಕಡೆ ಪಿಓಪಿ ಬದಲು ಅಪ್ಪಟ ಮಣ್ಣಿನ ಗಣೇಶ ಮೂರ್ತಿಗಳು ಲಭ್ಯ ಇವೆ.
ಒಂದು ಅಡಿಯಿಂದ ಹಿಡಿದು ಹಲವು ಅಡಿಗಳವರೆಗಿನ ವಿವಿಧ ಭಂಗಿಗಳ ವಿಗ್ರಹಗಳನ್ನ ತಯಾರಿಸಲಾಗಿದೆ. ಆದರೆ ಬಹುತೇಕ ಚಿಕ್ಕ ಮತ್ತು ದೊಡ್ಡ ಗಾತ್ರದ ವಿಗ್ರಹಗಳಿಗೆ ರಾಸಾಯನಿಕ ಬಣ್ಣಗಳನ್ನ ಲೇಪಿಸಲಾಗುತ್ತದೆ. ನೀರಿನಲ್ಲಿ ವಿಸರ್ಜಿಸಿದಾಗ ಎಲ್ಲಾ ರಾಸಾಯನಿಕಗಳೂ ನೀರಿನಲ್ಲಿ ಬೆರೆತು ನೀರನ್ನ ಮಲಿನಗೊಳಿಸುತ್ತವೆ. ಜಲಚರ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪರಿಸರ ಸ್ನೇಹಿ ಗಣಪನ ಬಗ್ಗೆ ಸ್ವಲ್ಪ ಜಾಗೃತಿ ಹೆಚ್ಚಾಗಿದೆ. ಗಣೇಶನ ವಿಗ್ರಹ ತಯಾರಿಸಲು ಬಳಸಲಾಗುವನೈಸರ್ಗಿಕವಲ್ಲದ ಬಣ್ಣಗಳಲ್ಲಿ ಸೀಸ, ಕ್ರೋಮಿಯಂ, ಕ್ಯಾಡ್ಮಿಯಂ, ನಿಕಲ್, ಮ್ಯಾಂಗನೀಸ್ ಅಂಶಗಳಿರುತ್ತವೆ.ಇದು ಪರಿಸರಕ್ಕೆ ಹಾನಿ ಉಂಟು ಮಾಡುತ್ತದೆ
ಮಣ್ಣಿನಿಂದ ಮಾಡಿದ ಗಣೇಶನ ಆರಾಧನೆಯೇ ಶ್ರೇಷ್ಠ ಎನ್ನುತ್ತಾರೆ ಧಾರ್ಮಿಕ ಚಿಂತಕರು. ಪರಿಸರಕ್ಕೆ ತೊಡಕು ಉಂಟುಮಾಡುವುದು ಭಗವಂತನ ಆರಾಧನೆಯಾಗುವುದಿಲ್ಲ. ನಮ್ಮನ್ನ ಸಲಹುತ್ತಿರುವ ಪರಿಸರಕ್ಕೆ ಕ್ಷೋಭೆಯಾಗದಂತೆ ಮೂರ್ತಿಯನ್ನ ಸ್ಥಾಪಿಸುವದು ಧರ್ಮಸಮ್ಮತ.ರಾಸಾಯನಿಕಗಳು ಇಲ್ಲದೆಯೂ ಸುಂದರ ವಿಗ್ರಹ ತಯಾರಿಸಲು ಸಾಧ್ಯ. ಹಿಟ್ಟುಗಳು, ಜೇಡಿಮಣ್ಣುಗಳಿಂದ ವಿಗ್ರಹ ತಯಾರಿಸಬಹುದು. ಕೆಮ್ಮಣ್ಣು,ಅಳಲೇಕಾಯಿ, ಅರಿಶಿನ, ಕುಂಕುಮ, ಅಶ್ವಗಂಧ, ವಿಭೂತಿ, ಗೋಪಿಚಂದನದಿಂದ ಅದಕ್ಕೆ ಬಣ್ಣ ಲೇಪಿಸಬಹುದು.ನೀವೂ ಈ ಬಾರಿ ಪರಿಸರ ಸ್ನೇಹಿ ಗಣೇಶನನ್ನು ತಂದು ಪ್ರತಿಷ್ಠಾಪಿಸಿ ಪರಿಸರ ಸೇವೆಯ ಹರಿಕಾರರಾಗಿ ಎಂದು ಹಾರೈಕೆ.