ಪರಿಸರದ ಉಳಿವಿಗೆ ಗಿಡ-ಮರಗಳನ್ನು ಬೆಳೆಸಬೇಕು

ಕಲಬುರಗಿ:ಎ.20: ಮಾನವ ತನ್ನ ದುರಾಸೆಯಿಂದ ಪರಿಸರದ ಮೇಲೆ ದಬ್ಬಾಳಿಕೆ ಮಾಡಿ,ಅನೇಕ ಗಿಡ-ಮರಗಳನ್ನು ನಾಶಪಡಿಸುವುದರ ಮೂಲಕ, ಪರಿಸರ ಅಸಮತೋಲನಕ್ಕೆ ಕಾರಣವಾಗಿದ್ದಾನೆ. ಇದರಿಂದ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಗಂಡಾತರ ತಪ್ಪಿದಲ್ಲ. ಆದ್ದರಿಂದ ಇರುವ ಅರಣ್ಯ ಸಂಪತ್ತನ್ನು ಕಾಪಾಡುವದರ ಜೊತೆಗೆ, ಉಳಿದ ಪ್ರದೇಶದಲ್ಲಿಯೂ ಗಿಡ-ಮರಗಳನ್ನು ಬೆಳೆಸಿದರೆ ಮಾತ್ರ ಪರಿಸರ ಉಳಿಯಲು ಸಾಧ್ಯವಿದೆಯೆಂದು ಉಪನ್ಯಾಸಕ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ಮಂಗಳವಾರ ಜರುಗಿದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಗಿಡಗಳಿಗೆ ನೀರುಣಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಪ್ರತಿಯೊಬ್ಬರು ತಮ್ಮ ಮನೆಯ ಸುತ್ತ-ಮುತ್ತಲೂ ಗಿಡಗಳನ್ನು ನೆಟ್ಟು, ಪೋಷಿಸಬೇಕು.ಇದರಿಂದ ಉತ್ತಮವಾದ ವಾತಾವರಣ ದೊರೆಯುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ಗಿಡ-ಮರಗಳನ್ನು ಮಗುವಿನಂತೆ ಪೋಷಿಸಿ ಕಾಪಾಡಬೇಕು. ದೇಶದ ಒಟ್ಟು ವಿಸ್ತೀರ್ಣದಲ್ಲಿ ಶೇ.33ರಷ್ಟು ಅರಣ್ಯದ ಅವಶ್ಯಕತೆಯಿದೆ. ಆದರೆ, ಪ್ರಸ್ತುತವಾಗಿ ಇದರ ಪ್ರಮಾಣ ಶೇ.21.5ರಷ್ಟಿದೆ. ಇದರಿಂದ ವಾತಾವರಣದಲ್ಲಿ ಏರು-ಪೇರಾಗುತ್ತಿದೆಯೆಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಚಂದ್ರಪ್ರಭ ಕಮಲಾಪುರಕರ್, ರವೀಂದ್ರಕುಮಾರ ಬಟಗೇರಿ, ಶರಣಮ್ಮ ಭಾವಿಕಟ್ಟಿ, ಶಂಕ್ರಪ್ಪ ಹೊಸದೊಡ್ಡಿ, ಮಂಜುನಾಥ ಎ.ಎಂ., ರೇಣುಕಾ ಚಿಕ್ಕಮೇಟಿ, ಜಮೀಲ್ ಅಹ್ಮದ್ ವರ್ದಿ, ಪ್ರಕಾಶ ಎ.ಪಾಟೀಲ, ಪ್ರ.ದ.ಸ ನೇಸರ ಬೀಳಗಿ, ಎನ್.ಎಸ್.ಎಸ್ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ, ಗುರುರಾಜ, ನಾಗರಾಜ ಸೇರಿದಂತೆ ಮತ್ತಿತರರಿದ್ದರು.