ಪರಿಸರದ ಉಳಿವಿಗೆ ಅರಣ್ಯಗಳ ರಕ್ಷಣೆ ಅಗತ್ಯ: ಶಿಳ್ಳೆಕ್ಯಾತ

ಕಲಬುರಗಿ: ಮಾನವ ತನ್ನ ದುರಾಸೆಯಿಂದ ಪರಿಸರದ ಮೇಲೆ ದಬ್ಬಾಳಿಕೆ ಮಾಡಿ,ಅನೇಕ ಗಿಡ-ಮರಗಳನ್ನು ನಾಶಪಡಿಸುವುದರ ಮೂಲಕ, ಪರಿಸರ ಅಸಮತೋಲನಕ್ಕೆ ಕಾರಣವಾಗಿದ್ದಾನೆ. ಇದರಿಂದ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಗಂಡಾತರ ತಪ್ಪಿದಲ್ಲ. ಆದ್ದರಿಂದ ಇರುವ ಅರಣ್ಯ ಸಂಪತ್ತನ್ನು ಕಾಪಾಡುವದರ ಜೊತೆಗೆ, ಉಳಿದ ಪ್ರದೇಶದಲ್ಲಿಯೂ ಗಿಡ-ಮರಗಳನ್ನು ಬೆಳೆಸಿದರೆ ಮಾತ್ರ ನಿಸರ್ಗ, ಪರಿಸರ ಉಳಿಯಲು ಸಾಧ್ಯವಿದಯೆಂದು ವಲಯ ಅರಣ್ಯ ಅಧಿಕಾರಿ ಭೀಮರಾಯ ಶಿಳ್ಳೆಕ್ಯಾತ ಅಭಿಮತ ವ್ಯಕ್ತಪಡಿಸಿದರು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ಕಿರು ಮೃಗಾಲಯದಲ್ಲಿ ಅರಣ್ಯ ಇಲಾಖೆ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಜಿಲ್ಲಾ ಕಿರು ಮೃಗಾಲಯ ಮತ್ತು ಮಕ್ಕಳ ಉದ್ಯಾನವನ, ‘ಬಸವೇಶ್ವರ ಸಮಾಜ ಸೇವಾ ಬಳಗ’ ಇವುಗಳ ಸಹಯೋಗದೊಂದಿಗೆ ಭಾನುವಾರ ಏರ್ಪಡಿಸಲಾಗಿದ್ದ ‘ವಿಶ್ವ ಅರಣ್ಯ ದಿನಾಚರಣೆ’ ಮತ್ತು ಉತ್ತಮವಾದ ಸೇವೆ ಸಲ್ಲಿಸುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸತ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅರಣ್ಯ ಸಂಚಾರಿ ದಳದ ವಲಯ ಅರಣ್ಯ ಅಧಿಕಾರಿ ಡಾ.ರಮೇಶ ಮಾಲಾ ಮಾತನಾಡಿ, ಪ್ರತಿಯೊಬ್ಬರು ತಮ್ಮ ಮನೆಯ ಸುತ್ತ-ಮುತ್ತಲೂ ಗಿಡಗಳನ್ನು ನೆಟ್ಟು, ಪೋಷಿಸಬೇಕು.ಇದರಿಂದ ಉತ್ತಮವಾದ ವಾತಾವರಣ ದೊರೆಯುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ಗಿಡ-ಮರಗಳನ್ನು ಮಗುವಿನಂತೆ ಪೋಷಿಸಿ ಕಾಪಾಡಿದರೆ, ಅವುಗಳು ನಮ್ಮನ್ನು ಕಾಪಾಡುತ್ತವೆಯೆಂದು ಅಭಿಪ್ರಾಯಪಟ್ಟರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ನಮ್ಮ ದೇಶದ ಒಟ್ಟು ವಿಸ್ತೀರ್ಣದಲ್ಲಿ ಶೇ.33ರಷ್ಟು ಅರಣ್ಯದ ಅವಶ್ಯಕತೆಯಿದೆ. ಆದರೆ, ಪ್ರಸ್ತುತವಾಗಿ ಇದರ ಪ್ರಮಾಣ ಶೇ.21.5ರಷ್ಟಿದೆ.ಇದರಿಂದ ಹಸಿರು ಮನೆ ಪರಿಣಾಮ ಉಂಟಾಗಿ,ಜಾಗತಿಕ ತಾಪಮಾನದಲ್ಲಿ ಏರಿಕೆಯುಂಟಾಗುತ್ತಿದೆ. ಹಸಿರುಮಯ ವಾತಾವರಣ ಕಾಣೆಯಾಗಿ, ಕಾಂಕ್ರೀಟ್ ಕಟ್ಟಡಗಳು ಎಲ್ಲೆಡೆ ತಲೆಯೆತ್ತಿವೆ.ಜೊತೆಗೆ ಮಳೆಯ ಪ್ರಮಾಣ ಕಡಿಮೆಯಾಗಿ ಬರಗಾಲ ಉಂಟಾಗಿದೆ. ಕುಡಿಯಲು ನೀರಿಲ್ಲದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಸಸ್ಯವರ್ಗ ಹಾಗೂ ಪ್ರಾಣಿವರ್ಗಗಳ ಮೇಲೆ ಸಾಕಷ್ಟು ದುಷ್ಪರಿಣಾಮವಾಗುತ್ತಿದ್ದು, ಇದರ ಬಗ್ಗೆ ವ್ಯಾಪಕ ಜಾಗೃತಿಯಾಗಬೇಕಾಗಿದೆಯೆಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ ಮತ್ತು ಎಸಿಎಫ್ ಬಾಬುರಾವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯ ಅಧಿಕಾರಿ ಮಲ್ಲಿಕಾರ್ಜುನ ಎಚ್.ಜಮಾದಾರ, ಅರಣ್ಯ ರಕ್ಷಕ ಕಾಂತಪ್ಪ ಪೂಜಾರಿ, ಪ್ರಾಣಿ ಪಾಲಕ, ಸದಾನಂದ ಶಿರವಾಳ, ಅರಣ್ಯ ವೀಕ್ಷಕಿ ಶಿವಲೀಲಾ ತೆಗನೂರ, ಕಾವಲುಗಾರ ತಾರಾನಾಥ ರಾಠೋಡ, ಪ್ರಮುಖರಾದ ಸುನೀಲಕುಮಾರ ವಂಟಿ, ಎಂ.ಬಿ.ನಿಂಗಪ್ಪ, ಬಸಯ್ಯಸ್ವಾಮಿ ಹೊದಲೂರ, ಸಂಜೀವ ಪಾಟೀಲ, ವಿಶಾಲ ಬಿರಾದಾರ ಸೇರಿದಂತೆ ಮತ್ತಿತರರಿದ್ದರು.