ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ: ಮೆಂಡನ್

ಕಾಪು, ಜೂ.೬- ಎಲ್ಲೂರಿನಲ್ಲಿ ನಿರ್ಮಾಣವಾಗುತ್ತಿರುವ ಕಾಪು ಪುರಸಭೆಯ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಪರಿಸರ, ಆರೋಗ್ಯಕ್ಕೆ ಧಕ್ಕೆಯಾಗದಂತೆ ವಿಲೇವರಿ ಕಾರ್ಯ ನಡೆಯಲಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.

ಕಾಪುವಿನ ತ್ಯಾಜ್ಯವನ್ನು ಎಲ್ಲೂರು ಘಟಕಕ್ಕೆ ಸ್ಥಳಾಂತರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಹಲವು ವರ್ಷಗಳಿಂದ ಕಾಪುವಿನ ಹೃದಯ ಭಾಗದಲ್ಲಿ ಶೇಖರಣೆಯಾಗಿದ್ದ ಘನತ್ಯಾಜ್ಯ ಸಮಸ್ಯೆ ಪರಿಹರಿಸಲು ಸವಾಲಾಗಿತ್ತು. ಈಗ ತ್ಯಾಜ್ಯವನ್ನು ಸ್ಥಳಾಂತರಿಸುವ ಮೂಲಕ ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆದಿದೆ. ಕಾಪು ಗ್ರಾಮ ಪಂಚಾಯಿತಿ ಇದ್ದಾಗಿನಿಂದ ಪುರಸಭೆ ಆಡಳಿತ ಅವಧಿಯಲ್ಲಿಯೂ ತ್ಯಾಜ್ಯ ವಿಲೇವರಿಗೆ ಸಾಕಷ್ಟು ಪ್ರಯತ್ನಗಳು ನಡೆದಿತ್ತು. ಅದಕ್ಕಾಗಿ ಎಲ್ಲೂರಿನ ಉಳ್ಳೂರು ಉಳ್ಳಾಲ ಕಾಡಿನ ೧೦ ಎಕರೆ ಜಮೀನನ್ನು ಕಾಪು ಪುರಸಭೆಗೆ ಘನತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಜಿಲ್ಲಾಡಳಿತ ನೀಡಿತ್ತು. ಆರಂಭದಲ್ಲಿ ಅಲ್ಲಿನ ಗ್ರಾಮಸ್ಥರ ವಿರೋಧವಿದ್ದರೂ, ಮಾತುಕತೆ ಮೂಲಕ ಅದನ್ನು ಪರಿಹರಿಸಿ ಘಟಕ ನಿರ್ಮಾಣ ಮಾಡಲಾಗಿದೆ. ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಇಂಜಿನಿಯರ್ ಪ್ರತಿಮಾ, ನಿಕಟಪೂರ್ವ ಅಧ್ಯಕ್ಷ ಅನಿಲ್ಕುದಮಾರ್, ಉಪಾಧ್ಯಕ್ಷ ಕೆ.ಎಚ್ ಉಸ್ಮಾನ್, ಸದಸ್ಯ ರಮೇಶ್ ಹೆಗ್ಡೆ, ಘಟಕದ ಗುತ್ತಿಗೆದಾರ ವಾಸುದೇವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.