ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಈಶ್ವರಪ್ಪ ವಿರುದ್ಧ ಸ್ಪರ್ಧೆ

ಶಿವಮೊಗ್ಗ,ಏ.೩:ಶಿವಮೊಗ್ಗ ನಗರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ವಿಧಾನ ಪರಿಷತ್ ಅಧ್ಯಕ್ಷ ಆಯನೂರು ಮಂಜುನಾಥ್ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾಜಿ ಸಚಿವ ಈಶ್ವರಪ್ಪ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಈಶ್ವರಪ್ಪರವರು ನನ್ನ ಬಗ್ಗೆ ತೀರಾ ಲಘುವಾಗಿ ಮಾತನಾಡಿದ್ದಾರೆ. ನಾನು ಅವರ ಮಟ್ಟದಲ್ಲಿ ಮಾತನಾಡಲ್ಲ. ಅವರ ವಿರುದ್ಧ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಈಶ್ವರಪ್ಪ ಸವಾಲನ್ನು ಸ್ವೀಕಾರ ಮಾಡಿದ್ದೇನೆ. ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎಂದರು.ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂಬುದು ನನ್ನ ಇಚ್ಛೆಯಾಗಿದೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲು ಮನವಿ ಮಾಡಿಕೊಂಡಿದ್ದೇನೆ. ನನ್ನ ಮನವಿಗೆ ಪೂರಕವಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗಬಹುದು ಎಂಬ ಲಕ್ಷಣಗಳು ಕಂಡು ಬಂದಿಲ್ಲ. ಆದರೆ. ಕೆಲವರ ಮಕ್ಕಳ ಹೆಸರು ಓಡಾಡುತ್ತಿವೆ. ಏನೇ ಇರಲಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಸದ್ಯದಲ್ಲೇ ವಿಧಾನ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ ಎಂದರು.
ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರೆ ಯಾವ ಪಕ್ಷದಿಂದ ಸ್ಪರ್ಧಿಸಬೇಕು. ಇಲ್ಲವೇ ಪಕ್ಷೇತರರಾಗಿ ಕಣಕ್ಕಿಳಿಯಬೇಕೇ ಎಂಬ ಬಗ್ಗೆ ಸದ್ಯದಲ್ಲೇ ತೀರ್ಮಾನಿಸುತ್ತೇನೆ ಎಂದರು.ಮಾಜಿ ಸಚಿವ ಈಶ್ವರಪ್ಪರವರು ನನ್ನ ಬಗ್ಗೆ ನನಗೇ ಸವಾಲು ಹಾಕಿದ್ದಾರೆ. ನಾನಂತೂ ಅವರ ಮಗನಾಗಲಿ, ಈಶ್ವರಪ್ಪರವರ ವಿರುದ್ಧವಾಗಲಿ ಸ್ಪರ್ಧಿಸುತ್ತೇನೆ. ಈಶ್ವರಪ್ಪರರಿಗೆ ಅಷ್ಟೊಂದು ಪ್ರಭಾವವಿದ್ದರೆ ಮಗನನ್ನು ನಿಲ್ಲಿಸಿಕೊಂಡು ಗೆಲ್ಲಿಸಿಕೊಳ್ಳಲಿ ಎಂದರು.
ಈಶ್ವರಪ್ಪ ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಸದನಕ್ಕೇ ಹೋಗಲಿಲ್ಲ. ಈಶ್ವರಪ್ಪರವರಿಗೆ ಸಚಿವ ಸ್ಥಾನದ ಹಪಾಹಪಿ. ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದಾಗ ಅವರು ಜಿಲ್ಲೆಗೆ ಬಂದಾಗ ಸ್ವಾಗತ ಮಾಡಲಿಲ್ಲ. ಅವರನ್ನು ಅವಮಾನಿಸಿದರು. ಈಶ್ವರಪ್ಪ ಚುನಾವಣೆಯಲ್ಲಿ ನಿಲ್ಲಲು ಅರ್ಹತೆ ಕಳೆದುಕೊಂಡಿದ್ದಾರೆ ಎಂದರು.
ಶಿವಮೊಗ್ಗದಲ್ಲಿ ನಾಲ್ಕೂವರೆ ಕೋಟಿ ಸೀರೆ ಸಿಕ್ಕಿದೆ. ಒಂದೂವರೆ ಕೋಟಿ ಹಣ ಸಿಕ್ಕಿದೆ. ಇಷ್ಟೊಂದು ಹಣ ಮತ್ತು ಸೀರೆ ತರಿಸುವಷ್ಟು ವ್ಯಾಪಾರಿ ಶಿವಮೊಗ್ಗದಲ್ಲಿ ಇಲ್ಲ ಎಂದರು.ಈಶ್ವರಪ್ಪರವರ ಗೋಡೌನ್‌ನಲ್ಲಿರುವ ಹಣ ಎಣಿಕೆ ಮಿಷನ್ ಜಪ್ತಿ ಆಗಿದ್ದರೆ, ಹೊಸದನ್ನು ತರಿಸಿಕೊಳ್ಳಲಿ. ಅವರು ಈಗಾಗಲೇ ವಾರ್ಡ್‌ಗಳಲ್ಲಿ ಹಣ ಸಂಗ್ರಹಿಸಿಟ್ಟಿದ್ದಾರೆ. ಕಾರ್ಪರೇಟರ್‌ಗಳು ಈಶ್ವರಪ್ಪರವರ ಹಿಡಿತದಲ್ಲಿ ನರಳುತ್ತಿದ್ದಾರೆ. ಕಾರ್ಯಕರ್ತರು ನನಗೆ ನೀವು ಸ್ಪರ್ಧೆ ಮಾಡಿ ನಿಮ್ಮ ಜತೆ ಇರುತ್ತೇನೆ ಎಂದು ಹೇಳಿದ್ದಾರೆ ಎಂದರು.ಶಿವಮೊಗ್ಗದಲ್ಲಿ ಅಭಿವೃದ್ಧಿಯಾಗಿರುವುದು ಯಡಿಯೂರಪ್ಪರವರಿಂದ, ರಾಘವೇಂದ್ರ ಅವರಿಂದ ೩೨ ವರ್ಷ ರಾಜಕಾರಣದಲ್ಲಿ ಈಶ್ವರಪ್ಪ ಪ್ರಚೋದನೆಯಿಂದ ಮಾತನಾಡಿರುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದರು.