ಪರಿಷತ್ ಸ್ಥಾನಕ್ಕೆ ತಿಪ್ಪಣ್ಣ ಒಡೆಯರ್ ನಾಮನಿರ್ದೇಶನಕ್ಕೆ ಭೋವಿ ಸಮಾಜದ ಆಗ್ರಹ

ಕಲಬುರಗಿ,ಜೂ.6: ಭೋವಿ ಸಮಾಜದ ಹಿರಿಯ ಮುಖಂಡ ತಿಪ್ಪಣ್ಣ ಒಡೆಯರಾಜ್ ಅವರಿಗೆ ರಾಜ್ಯ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್ ಸರ್ಕಾರ ನಾಮನಿರ್ದೇಶನ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ವಡ್ಡರ್ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ದಂಡಗುಲಕರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಪ್ಪಣ್ಣ ಒಡೆಯರಾಜ್ ಅವರು ಸಂಘದ ಅಧ್ಯಕ್ಷರಾಗಿದ್ದು, ಕಳೆದ ಚುನಾವಣೆಯೂ ಸೇರಿದಂತೆ ಹಲವಾರು ಚುನಾವಣೆಗಳಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ. ಅತ್ಯಂತ ಹಿರಿಯ ನಾಯಕರಾಗಿದ್ದು, ಅವರಿಗೆ ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಭೋವಿ ಸಮಾಜಕ್ಕೆ ರಾಜಕೀಯ ಸ್ಥಾನಮಾನ ಕಲ್ಪಿಸಬೇಕಾಗಿದೆ ಎಂದು ಹೇಳಿದ ಅವರು, 1985ರಲ್ಲಿ ಸಮಾಜದ ಗೋವಿಂದ್ ಪಿ. ಒಡೆಯರಾಜ್ ಅವರಿಗೆ ರಾಜ್ಯ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿದ್ದು ಬಿಟ್ಟರೆ ಇಲ್ಲಿಯವರೆಗೂ ಸಮಾಜದ ಯಾರಿಗೂ ಪರಿಷತ್ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಮೂರು ಮೀಸಲು ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳಲ್ಲಿ ಲಂಬಾಣಿ ಸಮಾಜದವರಿಗೆ ಹಾಗೂ ಇನ್ನೊಂದು ಕ್ಷೇತ್ರದಲ್ಲಿ ಬಲಗೈ ಸಮುದಾಯಕ್ಕೆ ನೀಡುವ ಮೂಲಕ ಭೋವಿ ಸಮಾಜವನ್ನು ಕಡೆಗಣಿಸಲಾಯಿತು. ಆದಾಗ್ಯೂ, ಭೋವಿ ಸಮಾಜದವರು ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದರಿಂದ ಜಿಲ್ಲೆಯಲ್ಲಿ ಅತೀ ಹೆಚ್ಚು ಸ್ಥಾನಗಳು ಕಾಂಗ್ರೆಸ್ಸಿಗೆ ಲಭಿಸಿವೆ ಎಂದು ಅವರು ಹೇಳಿದರು.
ಹಿಂದೆ ಬಿಜೆಪಿ ಸರ್ಕಾರವು ಅಸ್ತಿತ್ವಕ್ಕೆ ಬರುವಲ್ಲಿ ಭೋವಿ ಸಮಾಜದ ಪಕ್ಷೇತರ ಶಾಸಕರೇ ಕಾರಣ. ಹೀಗಾಗಿ ಪ್ರಥಮ ಬಾರಿಗೆ ಇಡೀ ದಕ್ಷಿಣ ಭಾರತದಲ್ಲಿಯೇ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿತು. ನಂತರ ಬಿಜೆಪಿಯು ಭೋವಿ ಸಮಾಜದವರಿಗೆ ಕಡೆಗಣಿಸಿತು. ಎರಡನೇ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸಮಾಜದ ಐವರು ಶಾಸಕರಲ್ಲಿ ಒಬ್ಬರಿಗೂ ಸಹ ಸಚಿವ ಸ್ಥಾನ ಕೊಡಲಿಲ್ಲ. ಹೀಗಾಗಿ ಬಿಜೆಪಿಯು ಅಧಿಕಾರ ಕಳೆದುಕೊಳ್ಳುವಂತೆ ಆಗಿದೆ ಎಂದು ಅವರು ತಿಳಿಸಿದರು.
ಭೋವಿ, ಬಂಜಾರಾ, ಕೊರಮ, ಕೊರಚ ಮುಂತಾದ ಮುಖಂಡರೊಂದಿಗೆ ಸೇರಿ ಮುಖಂಡ ತಿಪ್ಪಣ್ಣ ಒಡೆಯರಾಜ್ ಅವರು ಬಿಜೆಪಿ ವಿರುದ್ಧ ಕೆಲಸ ಮಾಡಿದರು. ಅಲ್ಲದೇ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದರು. ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಕೊಡಲು ತಿಪ್ಪಣ್ಣ ಒಡೆಯರಾಜ್ ಅವರಿಗೆ ಪರಿಷತ್ ಸ್ಥಾನ ಕೊಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ದೇವಿಂದ್ರ ನಡುವಿನಮನಿ, ಮೋಹನ್ ವಿಠಕರ್, ವಿದ್ಯಾನಂದ್ ಒಡೆಯರಾಜ್, ಅರುಣ್ ಮಾಶಾಳಕರ್, ರಾಜು ಎಂಪುರೆ ಮುಂತಾದವರು ಉಪಸ್ಥಿತರಿದ್ದರು.