ಪರಿಷತ್ ಸದಸ್ಯ ಸ್ಥಾನಕ್ಕೆ ಶಂಕರ್ ರಾಜೀನಾಮೆ

ಬೆಂಗಳೂರು: ಏ.12-ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ರಾಣಿಬೆನ್ನೂರು ಕ್ಷೇತ್ರದ ಆಕಾಂಕ್ಷಿಯಾಗಿದ್ದ ಆರ್. ಶಂಕರ್ ಅವರು ವಿಧಾನ ಪರಿಷತ್ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.
ಆರ್. ಶಂಕರ್ ಅವರು ಬೆಂಬಲಿಗರೊಂದಿಗೆ ವಿಧಾನಸೌಧಕ್ಕೆ ಆಗಮಿಸಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಆದರೆ ಯಾವ ಪಕ್ಷವೋ ಅಥವಾ ಪಕ್ಷೇತರವಾಗಿ ಸ್ಪರ್ಧಿಸಬೇಕೋ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದರು.
ತಮ್ಮನ್ನು ಪಕ್ಷಕ್ಕೆ ಕರೆದುಕೊಂಡ ಹೋದವರು ಯಾರು ಈಗ ಮಾತಾನಾಡುತ್ತಿಲ್ಲ. ಕಮಿಷನ್, ಜೂಜು, ಆರೋಪ ಎದುರಿಸುತ್ತಿರುವವರಿಗೆ ಟಿಕೆಟ್ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರ ಬರಲು ಕಾರಣವಾದವನು ನಾನು. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಅನ್ನೋ ಸಂದರ್ಭದಲ್ಲಿ ಕೆಲಸ ಮಾಡಿದವನು ನಾನು. ಆದರೆ ಈ ರೀತಿ ನಡೆಸಿಕೊಂಡದ್ದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.