ಪರಿಷತ್ ಸದಸ್ಯತ್ವಕ್ಕೆ ತೇಜಸ್ವಿನಿಗೌಡ ರಾಜೀನಾಮೆ

ಬೆಂಗಳೂರು,ಮಾ.೨೭- ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿಯ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ವಿಧಾನ್ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಅವರು ಹೇಳಿದ್ದಾರೆ.
ತೇಜಸ್ವಿನಿ ಗೌಡ ಅವರ ಪರಿಷತ್ ಸದಸ್ಯ ಸ್ಥಾನದ ಅವಧಿ ಈ ವರ್ಷದ ಜೂನ್ ತನಕ ಇತ್ತು ಎನ್ನಲಾಗಿದೆ.
ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿದ್ದ ಹೆಸರು ತೇಜಸ್ವಿನಿ ಗೌಡ ಅವರಿಗಿದೆ. ಇದಲ್ಲದೇ ಪತ್ರಕರ್ತೆಯಾಗಿರುವ ಅವರು ತಮ್ಮ ಮಾತಿನಿಂದಲೇ ಎರಡು ದಶಕಗಳ ಹಿಂದೆಯೇ ರಾಜಕಾರಣಕ್ಕೆ ಪ್ರವೇಶ ಮಾಡಿದ್ದರು, ಸದ್ಯದಲ್ಲಿಯೇ ಅವರು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿಯಿಂದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಇರುವ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಬದಲಿಗೆ ತಮಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದರು.
ಜೊತೆಗೆ ಇತ್ತೀಚಿನ ದಿನಗಳಲ್ಲಿ ಬಿಜೆಪಿಯಿಂದ ಕಡೆಗಣನೆಗೆ ಒಳಗಾಗಿದ್ದ ಅವರು ಬಿಜೆಪಿ ತೊರೆಯಲು ಕಾರಣ ಎನ್ನಲಾಗಿದೆ.