ಪರಿಷತ್ ಚುನಾವಣೆ ಸಿ.ಟಿ ರವಿಗೆ ಮಣೆ

ಬೆಂಗಳೂರು,ಜೂ.೨:ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಇಂದು ಪ್ರಕಟಿಸಲಾಗಿದೆ.
ಹಾಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್,ಮಾಜಿ ಸಿ.ಟಿ ರವಿ ಹಾಗೂ ಎಂ.ಜಿ ಮುಳೆ ಅವರಿಗೆ ಹೈಕಮಾಂಡ್ ಮಣೆ ಹಾಕಿದೆ. ವಿಧಾನಸಭಾ ಚುನಾವಣೆಯಲ್ಲಿ ಸಿ.ಟಿ ರವಿ ಸೋಲನುಭವಿಸಿದ್ದರು, ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬಾರದು ಎಂಬ ಒತ್ತಡವಿತ್ತು. ಆದರೆ,ಸಿ.ಟಿ ರವಿ ಹೈಕಮಾಂಡ್‌ಮೇಲೆ ಒತ್ತಡ ಹೇರಿ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.
ಸಿ.ಟಿ ರವಿಗೆ ಅವಕಾಶನೀಡುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ೧ ಸ್ಥಾನ ಲಭಿಸಿದರೆ, ಓಬಿಸಿ ವರ್ಗದಿಂದ ರವಿಕುಮಾರ್ ಹಾಗೂ ಮರಾಠ ಸಮುದಾಯದಿಂದ ಎಂ.ಜಿ ಮುಳೆ ಅವರಿಗೆ ಟಿಕೆಟ್ ನೀಡಲಾಗಿದೆ.

ನಾಳೆ ಕಡೇ ದಿನ
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ೧೧ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕಡೆ ದಿನವಾಗಿದೆ. ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿಲ್ಲ.
೧೧ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ೭, ಬಿಜೆಪಿ ೩ ಮತ್ತು ಜೆಡಿಎಸ್‌ನಿಂದ ೧ ಸ್ಥಾನ ಗೆಲ್ಲುವ ಅವಕಾಶವಿದೆ.ಜೂ. ೧೩ ರಂದು ಮತದಾನ ನಿಗದಿಯಾಗಿದ್ದು,ಅದೇ ದಿನ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.