ಪರಿಷತ್ ಚುನಾವಣೆ; ಸರಳ ಕನಕ ಜಯಂತಿ ಆಚರಣೆ


ಚಿತ್ರದುರ್ಗ,ನ.೧೬; ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ನ. 22 ರಂದು ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಗುತ್ತಿದ್ದು ವಿಧಾನ ಪರಿಷತ್ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕನಕ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ 22 ರಂದು ಬೆಳಗ್ಗೆ 10.30 ಕ್ಕೆ ಕನಕ ವೃತ್ತದಲ್ಲಿ ಕನಕ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುತ್ತದೆ. ನಂತರ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ಉಪನ್ಯಾಸ ಏರ್ಪಡಿಸುವ ಮೂಲಕ ಸರಳವಾಗಿ ಆಚರಣೆ ಮಾಡಲಾಗುತ್ತದೆ. ಯಾವುದೇ ವೇದಿಕೆ ಕಾರ್ಯಕ್ರಮಗಳು ಇರುವುದಿಲ್ಲ. ಎಲ್ಲರೂ ಕನಕದಾಸರ ಜಯಂತಿಯನ್ನು ಭಕ್ತಿಯಿಂದ ಆಚರಣೆ ಮಾಡಲು ತಿಳಿಸಿದರು.
 ಕನಕವೃತ್ತ ಹಾಗೂ ನಗರದಲ್ಲಿನ ವಿವಿಧ ವೃತ್ತಗಳಲ್ಲಿ ಸ್ವಚ್ಚ ಮಾಡಲು ಹಾಗೂ ಅಲಂಕಾರ ಮಾಡಲು ನಗರಸಭೆಯಿಂದ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
 ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಮತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಧನಂಜಯ, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷರಾದ ಶ್ರೀರಾಮ್, ಕಾರ್ಯದರ್ಶಿ ಕರಿಯಪ್ಪ ಹಾಗೂ ಸಮಾಜದ ವಿವಿಧ ಮುಖಂಡರುಗಳು ಭಾಗವಹಿಸಿದ್ದರು.