ಪರಿಷತ್ ಚುನಾವಣೆ: ಮಾದಿಗ ಸಮಾಜಕ್ಕೆ ಪ್ರಾತಿನಿಧ್ಯ ನೀಡಲು ನಾಟೀಕಾರ್ ಆಗ್ರಹ

ಕಲಬುರಗಿ,ಜೂ.12: ರಾಜ್ಯ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಮಾದಿಗ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ಕೊಡಬೇಕು ಎಂದು ಕರ್ನಾಟಕ ರಾಜ್ಯ ಮಾದಿಗ ಸಮಾಜದ ವಿಭಾಗೀಯ ಅಧ್ಯಕ್ಷ ಚಂದ್ರಕಾಂತ್ ಕೆ. ನಾಟೀಕಾರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಿದ್ದು ಸ್ವಾಗತಾರ್ಹವಾಗಿದೆ. ಆದ್ದರಿಂದ ಕೂಡಲೇ ಪರಿಷತ್ ಸ್ಥಾನಗಳಲ್ಲಿ ಹಾಗೂ ನಿಗಮ, ಮಂಡಳಿಗಳ ನೇಮಕಾತಿಯಲ್ಲಿ ಮಾದಿಗ ಸಮಾಜದವರಿಗೆ ಸೂಕ್ತ ಪ್ರಾತಿನಿಧ್ಯ ಕೊಡಬೇಕು ಎಂದರು.
ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ನಿಷ್ಠಾವಂತ ಹಿರಿಯ ಕಾರ್ಯಕರ್ತರಿದ್ದಾರೆ. ಅಂಥವರಿಗೆ ಗುರುತಿಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂರು ಮೀಸಲು ಕ್ಷೇತ್ರಗಳಲ್ಲಿ ಗುರುತಿಸಿ ಟಿಕೆಟ್ ಸಹ ಕಾಂಗ್ರೆಸ್ ಪಕ್ಷದಿಂದ ನೀಡಲಾಗಿಲ್ಲ. ಆದಾಗ್ಯೂ, ಟಿಕೆಟ್ ಸಿಗದೇ ಇದ್ದರೂ ಸಹ ಪಕ್ಷದ ಅಧಿಕೃತ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ್ದಾರೆ. ಹಾಗಾಗಿ ಅಂಥವರಿಗೆ ಗುರುತಿಸಿ ಪರಿಷತ್ ಸ್ಥಾನ ನೀಡಬೇಕು ಇಲ್ಲವೇ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಮಾದಿಗ ಸಮಾಜದ ಮುಖಂಡರಾದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಶ್ಯಾಮ್ ನಾಟೀಕಾರ್, ಮಾಜಿ ಮಹಾಪೌರರಾದ ಶ್ರೀಮತಿ ಚಂದ್ರಿಕಾ ಪರಮೇಶ್ವರ್ ಸೇರಿದಂತೆ ಅನೇಕ ನಾಯಕರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಅಂಥವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಇಲ್ಲವೇ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವಂತೆ ಅವರು ಆಗ್ರಹಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ರಾಜ್ಯದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಖಾತೆಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಸಮಾಜಕ್ಕೆ ಪ್ರಾತಿನಿಧ್ಯ ಕೊಡಬೇಕು ಎಂದು ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಿದ್ದಲಿಂಗ್ ಕಟ್ಟಿಮನಿ, ರಮೇಶ್ ಕಟ್ಟಿಮನಿ, ಅರ್ಜುನ್ ಕಟ್ಟಿಮನಿ, ಗುರುನಾಥ್ ಮೇಣಗೇರಿ ಮುಂತಾದವರು ಉಪಸ್ಥಿತರಿದ್ದರು.