ಪರಿಷತ್ ಚುನಾವಣೆ :ಮಂಚೂಣಿಯಲ್ಲಿ ಆನಂದ್ ಹೆಸರು

ಬೆಂಗಳೂರು, ಮೇ, ೩೧; ಕಳೆದ ೩೬ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತ ಮತ್ತು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಡಾ. ಆನಂದ್ ಕುಮಾರ್ ಹೆಸರು ವಿಧಾನಪರಿಷತ್ ಸ್ಥಾನಕ್ಕೆ ಮಂಚೂಣಿಗೆ ಬಂದಿದೆ.
ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಲಾಬಿ ತೀವ್ರಗೊಂಡಿದ್ದು, ಯಾವುದೇ ಕ್ಷಣದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ನೀರೀಕ್ಷೆಯಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಡಾ. ಆನಂದ್ ಕುಮಾರ್ ಅವರಿಗೆ ಬೆಂಬಲವಾಗಿ ನಿಂತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಹ ಡಾ. ಆನಂದ್ ಕುಮಾರ್ ಹೆಸರಿಗೆ ಅನುಮೋದನೆ ನೀಡಿದ್ದಾರೆ. ಚಂಡು ಇದೀಗ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಂಗಳದಲ್ಲಿದೆ.
ದಲಿತ ಸಮುದಾಯದ ಬಲಗೈ ಪಂಗಡಕ್ಕೆ ಸೇರಿರುವ ಡಾ. ಆನಂದ್ ಕುಮಾರ್ ಪಕ್ಷ ಸಂಘಟನೆ ಜೊತೆಗೆ ಪಕ್ಷದ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ೨೦೦೯ ರಿಂದ ೨೦೧೪ ರ ವರೆಗೆ ಕಿಸಾನ್ ಕಾಂಗ್ರೆಸ್ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ್ದು, ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.
ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ನೇತೃತ್ವದ ನಿಯೋಗ ಇತ್ತೀಚೆಗೆ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಆನಂದ್ ಕುಮಾರ್ ಹೆಸರನ್ನು ಪರಿಗಣಿಸುವಂತೆ ಕೋರಿದ್ದರು. ಅಂತಿಮ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡು ಇದೀಗ ಅವರ ಹೆಸರು ಮಂಚೂಣಿಗೆ ಬಂದಿರುವುದಾಗಿ ತಿಳಿದು ಬಂದಿದೆ.