ಪರಿಷತ್ ಚುನಾವಣೆ: ಬೂಕಹಳ್ಳಿ ಮಂಜು ಮತಯಾಚನೆ

ಕೆ.ಆರ್.ಪೇಟೆ: ಡಿ.01:- ಕೆ.ಆರ್.ಪೇಟೆ ತಾಲೂಕಿನ ಸಮಗ್ರ ಅಭಿವೃದ್ದಿಗೆ ಸಾವಿರಾರು ಕೋಟಿ ರೂಗಳ ಅನುದಾನ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿಜವಾದ ಮಣ್ಣಿನ ಮಗ ಎಂದು ಸಚಿವ ಕೆ.ಸಿ.ನಾರಾಯಣಗೌಡ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಪರವಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಜೆಡಿಎಸ್ ಪಕ್ಷದ ಮೂಲಕ ಮೊದಲು ಶಾಸಕನಾದ ನಾನು ಕ್ಷೇತ್ರದ ಅಭಿವೃದ್ದಿಗಾಗಿ ಬಿಜೆಪಿಗೆ ಸೇರಬೇಕಾಯಿತು. ಅಭಿವೃದ್ದಿ ವಿಚಾರದಲ್ಲಿ ಜೆಡಿಎಸ್ ವರಿಷ್ಠರು ಹಾಸನ ಮತ್ತು ರಾಮನಗರ ಜಿಲ್ಲೆಗಳನ್ನು ಹೊರತು ಪಡಿಸಿ ಇತರ ಜಿಲ್ಲೆಗಳ ಸಮಗ್ರ ಅಭಿವೃದ್ದಿಗೆ ಅಗತ್ಯ ಅನುದಾನ ನೀಡಲಿಲ್ಲ.
ಮುಂಬೈನಿಂದ ಸಮಾಜ ಸೇವಕನಾಗಿ ಕ್ಷೇತ್ರಕ್ಕೆ ಬಂದ ನನಗೆ ಕ್ಷೇತ್ರದ ಮತದಾರರು ಆರ್ಶೀವಾದ ಮಾಡಿದರು. ಆದರೆ ಜೆಡಿಎಸ್ ಪಕ್ಷದಲ್ಲಿ ಜನರ ಆಶಯಕ್ಕೆ ತಕ್ಕಂತೆ ಅಭಿವೃದ್ದಿಗೆ ಅಗತ್ಯ ಸಹಕಾರ ದೊರಕಲಿಲ್ಲ. ಕ್ಷೇತ್ರದ ಅಭಿವೃದ್ದಿಗಾಗಿ ನಾನು ಬಿಜೆಪಿ ಸೇರಿದೆ. ನಾನೇ ಖುದ್ದಾಗಿ ಯಡಿಯೂರಪ್ಪ ಅವರ ಮನೆ ಬಾಗಿಲಿಗೆ ಹೋಗಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದೆ.
ಯಡಿಯೂರಪ್ಪ ಮೊದಲ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಕ್ಷೇತ್ರದ ಅಭಿವೃದ್ದಿಗೆ 400 ಕೋಟಿ ನೀಡಿದ್ದರು. ಇದರ ಅರಿವಿದ್ದ ನಾನು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ಬಿಜೆಪಿ ಸೇರಿದೆ. ನನ್ನ ಕ್ಷೇತ್ರದ ಅಭಿವೃದ್ದಿಗೆ 700 ಕೋಟಿ ಅನುದಾನ ಕೇಳಿದೆ. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಒಂದು ಸಾವಿರ ಕೋಟಿ ನೀಡಿದರು. ನುಡಿದಂತೆ ನಡೆದ ರಾಜ್ಯದ ಏಕೈಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದು ಹೊಗಳಿದ ಸಚಿವ ಕೆ.ಸಿ.ನಾರಾಯಣಗೌಡ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಸರಳ ಮತ್ತು ಶಿಸ್ತಿನ ವ್ಯಕ್ತಿ. ಮಂಡ್ಯ ಜಿಲ್ಲೆಯಲ್ಲಿ ಇವರ ಗೆಲುವು ನಿಶ್ಚಿತ. ಆದರೆ ಇವರು ನಮ್ಮ ಕೆ.ಆರ್.ಪೇಟೆ ನೆಲದವರಾಗಿದ್ದು ಕ್ಷೇತ್ರದ ಮತದಾರರು ಹೆಚ್ಚಿನ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಬಿಜೆಪಿ ಅಭಿವೃದ್ದಿ ಪರವಾದ ಸರ್ಕಾರ. ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ 3 ಸಾವಿರ ಕೋಟಿ ರೂಗಳ ವಿಶೇಷ ಪ್ಯಾಕೇಜ್ ರೂಪಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮೂರು ಭಾಗವಾಗಿದೆ. ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಎನ್.ಚಲುವರಾಯಸ್ವಾಮಿ, ಪಿ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಮುಂತಾದವರಿದ್ದರೂ ಗೆಲುವು ಸಾಧ್ಯವಿಲ್ಲ ಎನ್ನುವ ಕಾರಣದಿಂದ ಸಾಮಾನ್ಯ ಕಾರ್ಯಕರ್ತನೊಬ್ಬನಿಗೆ ಟಿಕೆಟ್ ನೀಡಿ ಕಾಂಗ್ರೆಸ್ ಅವನನ್ನು ಬಲಿಪಶು ಮಾಡಲು ಹೊರಟಿದೆ ಎಂದು ಟೀಕಿಸಿದ ಸಚಿವ ಕೆ.ಸಿ.ನಾರಾಯಣಗೌಡ ಜೆಡಿಎಸ್ ಅಭ್ಯರ್ಥಿ ಅಪ್ಪಾಜಿಗೌಡ ಕಳೆದ ಅವಧಿಯಲ್ಲಿ ಒಂದೇ ಒಂದು ನಯಾಪೈಸೆ ಅನುದಾನವನ್ನು ಜಿಲ್ಲೆಯ ಗ್ರಾಮೀಣ ಅಭಿವೃದ್ದಿಗೆ ಬಳಕೆ ಮಾಡಲಿಲ್ಲ. ಇದಕ್ಕೆ ಕಾರಣ ಅವರ ಅನುದಾನವನ್ನು ಜೆಡಿಎಸ್ ಪಕ್ಷದ ವರಿಷ್ಠರು ಕಿತ್ತುಕೊಳ್ಳುತ್ತಿದ್ದರೆಂದು ಆರೋಪಿಸಿದರು.
ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರದ ರಸ್ತೆಗಳು ಕಿತ್ತುಹೋಗಿವೆ ಎನ್ನುವ ದೂರಿದೆ. ಇದು ನಿಜ. ದೊಡ್ಡ ದೊಡ್ಡ ಯೋಜನೆಗಳಿಗೆ ಕೋಟಿ ಕೋಟಿ ಅನುದಾನ ತಂದಿರುವ ಕಾರಣ ರಸ್ತೆ ಅಭಿವೃದ್ದಿಗೆ ಅಗತ್ಯ ಅನುದಾನವನ್ನು ಇನ್ನೂ ತರಲಾಗಿಲ್ಲ. ಬೂಕಹಳ್ಳಿ ಮಂಜು ಅವರನ್ನು ಚುನಾಯಿಸಿ ಬೆಳಗಾವಿಯ ಅಧಿವೇಶನಕ್ಕೆ ಅವರನ್ನು ನನ್ನ ಜೊತೆ ಸೇರಿಸಿ. ಅವರ ಸಹಕಾರದಿಂದ 150 ಕೋಟಿ ವಿಶೇಷ ಅನುದಾನ ತಂದು ತಾಲೂಕಿನ ರಸ್ತೆಗಳ ಅಭಿವೃದ್ದಿ ಮಾಡಿಸುತ್ತೇನೆಂದು ಹೇಳಿದ ಕೆ.ಸಿ.ನಾರಾಯಣಗೌಡ ಮುಂದಿನ ದಿನಗಳಲ್ಲಿ ದೇಶ ಮತ್ತು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು ಜನ ಅಭಿವೃದ್ದಿಗಾಗಿ ಬಿಜೆಪಿಗೆ ಮತಹಾಕುವಂತೆ ಮನವಿ ಮಾಡಿದರು.