ಪರಿಷತ್ ಚುನಾವಣೆ: ಬಿಜೆಪಿಯಿಂದ ಬಿ.ಜಿ. ಪಾಟೀಲ್, ಕಾಂಗ್ರೆಸ್ಸಿನಿಂದ ಶಿವಾನಂದ್ ಪಾಟೀಲ್ ನಾಮಪತ್ರ ಸಲ್ಲಿಕೆ

ಕಲಬುರಗಿ,ನ.23: ಡಿಸೆಂಬರ್ 10ರಂದು ಕಲಬುರ್ಗಿ- ಯಾದಗಿರಿ ಅವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‍ಗೆ ನಡೆಯಲಿರುವ ಚುನಾವಣೆಗೆ ಸ್ಪರ್ಧೆ ಬಯಸಿ ಬಿಜೆಪಿಯಿಂದ ಬಿ.ಜಿ. ಪಾಟೀಲ್ ಹಾಗೂ ಕಾಂಗ್ರೆಸ್ಸಿನಿಂದ ಶಿವಾನಂದ್ ಪಾಟೀಲ್ ಮರತೂರ್ ಅವರು ತಮ್ಮ ಬೆಂಬಲಿಗ ಕಾರ್ಯಕರ್ತರ ಬೃಹತ್ ಶಕ್ತಿ ಪ್ರದರ್ಶನದೊಂದಿಗೆ ಮಂಗಳವಾರ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರಿಗೆ ನಾಮಪತ್ರ ಸಲ್ಲಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ್ ಕೋಡ್ಲಿ ಅವರೂ ಸಹ ನಾಮಪತ್ರ ಸಲ್ಲಿಸಿದರು.
ಬೆಳಿಗ್ಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಿಂದ ಕಾರ್ಯಕರ್ತರ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿದ ಅಭ್ಯರ್ಥಿ ಶಿವಾನಂದ್ ಪಾಟೀಲ್ ಅವರು ಜಿಲ್ಲಾಧಿಕಾರಿಗಳಿಗೆ ಒಟ್ಟು ಎರಡು ಸೆಟ್ಟುಗಳಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್, ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪೂರ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ ಅವರು ಉಪಸ್ಥಿತರಿದ್ದರು.
ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ್ ಅವರು ವೀರಶೈವ ಕಲ್ಯಾಣ ಮಂಟಪದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಆಗಮಿಸಿ ಒಟ್ಟು ನಾಲ್ಕು ಸೆಟ್ಟುಗಳಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸಂಸದ ಡಾ. ಉಮೇಶ್ ಜಾಧವ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೆಲ್ಕೂರ್, ಶಾಸಕರಾದ ಸುಭಾಷ್ ಆರ್. ಗುತ್ತೇದಾರ್, ಡಾ. ಅವಿನಾಶ್ ಜಾಧವ್, ಬಸವರಾಜ್ ಮತ್ತಿಮೂಡ್, ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಶರಣಭೂಪಾಲರೆಡ್ಡಿ, ಚಂದು ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.
ಅಭ್ಯರ್ಥಿಗಳು ಭವ್ಯ ಮೆರವಣಿಗೆಯಲ್ಲಿ ಪಕ್ಷದ ಧ್ವಜಗಳನ್ನು ಹಿಡಿದ ಕಾರ್ಯಕರ್ತರೊಂದಿಗೆ ತೆರಳುವಾಗ ಬಸವೇಶ್ವರರು, ಅಂಬೇಡ್ಕರರು, ಡಾ. ಬಾಬು ಜಗಜೀವನರಾಮ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಇನ್ನು ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ್ ಕೋಡ್ಲಿ ಅವರು ತಮ್ಮ ನಾಮಪತ್ರ ಸಲ್ಲಿಸಿದರು.
ಬಿ.ಜಿ. ಪಾಟೀಲ್ ಕೋಟ್ಯಾಧಿಪತಿ: ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ್ ಅವರು ಕೋಟ್ಯಾಧಿಪತಿಗಳಾಗಿದ್ದು, ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿಯೇ ಅತ್ಯಂತ ಶ್ರೀಮಂತಿಕೆಯನ್ನು ಹೊಂದಿದ್ದಾರೆ. ತಮ್ಮ ಆಸ್ತಿ ವಿವರಣೆಯಲ್ಲಿ ಬಿ.ಜಿ. ಪಾಟೀಲ್ ಅವರು 9.43 ಕೋಟಿ ರೂ.ಗಳು, ಪತ್ನಿ ಶ್ರೀಮತಿ ಸುರೇಖಾ ಪಾಟೀಲ್ ಅವರ ಹೆಸರಿನಲ್ಲಿ 8.58 ಕೋಟಿ ರೂ.ಗಳು, ಜೆ.ಎ, ಪಾಟೀಲ್ ಅವರ ಹೆಸರಿನಲ್ಲಿ 8.8 ಕೋಟಿ ರೂ.ಗಳು, ಕೆ.ಬಿ. ಪಾಟೀಲ್ ಅವರ ಹೆಸರಿನಲ್ಲಿ 3.31 ಕೋಟಿ ರೂ.ಗಳ ಚರಾಸ್ತಿಯನ್ನು ಹೊಂದಿದ್ದಾರೆ.
ಬಿ.ಜಿ. ಪಾಟೀಲ್ ಅವರು 144 ಗ್ರಾಮ್ ತೂಕದ ಚಿನ್ನ, 50,000 ಗ್ರಾಮ್ ತೂಕದ ಬೆಳ್ಳಿಯನ್ನು ಹಾಗೂ ಶ್ರೀಮತಿ ಸುರೇಖಾ ಪಾಟೀಲ್ ಅವರು 45 ಗ್ರಾಮ್ ಚಿನ್ನ, 5000 ಗ್ರಾಮ್ ತೂಕದ ಬೆಳ್ಳಿ ಹೊಂದಿದ್ದಾರೆ. ಬಿ.ಜಿ. ಪಾಟೀಲ್ ಅವರು ಒಟ್ಟು 11.59 ಕೊಟಿ 6500ರೂ.ಗಳ ಹಾಗೂ ಪತ್ನಿ ಶ್ರೀಮತಿ ಸುರೇಖಾ ಅವರು 1.75 ಕೋಟಿ ರೂ.ಗಳ, ಸಿ.ಬಿ. ಪಾಟೀಲ್ ಅವರು 1.26 ಕೋಟಿ ರೂ.ಗಳು, ಕೆ.ಬಿ. ಪಾಟೀಲ್ ಅವರು 88 ಲಕ್ಷ 785ರೂ.ಗಳ ಸ್ಥಿರಾಸ್ತಿಯನ್ನು ಹೊಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯದು ಕಡಿಮೆ ಆದಾಯ: ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶಿವಾನಂದ್ ಪಾಟೀಲ್ ಅವರ ಆದಾಯವು ಅತ್ಯಂತ ಕಡಿಮೆಯಾಗಿದೆ. ತಮ್ಮ ಚುನಾವಣಾ ಆಸ್ತಿ ಸಲ್ಲಿಕೆಯಲ್ಲಿ ಕೇವಲ 71,600ರೂ.ಗಳ ಆದಾಯವನ್ನು ತೋರಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿನ ಆದಾಯದಲ್ಲಿ ಪ್ರಸ್ತುತ ವರ್ಷದ ಆದಾಯವೂ ಸಹ ಕಡಿಮೆಯಾಗಿದೆ.
2017-2018ರಲ್ಲಿ 91951ರೂ.ಗಳು, 2018-2019ರಲ್ಲಿ 52560 ರೂ.ಗಳು, 2019-2020ರಲ್ಲಿ 41270ರೂ.ಗಳು, 2021-2022ರಲ್ಲಿ 71,600ರೂ.ಗಳ ಆದಾಯದ ವಿವರವನ್ನು ಅವರು ನೀಡಿದ್ದಾರೆ.
ಶಿವಾನಂದ್ ಪಾಟೀಲ್ ಅವರ ಪತ್ನಿ ಶ್ರೀಮತಿ ಲಕ್ಷ್ಮೀ ಪಾಟೀಲ್ ಅವರ ಆದಾಯವು 2017-2018ರಲ್ಲಿ 24,800ರೂ.ಗಳು, 2018-2019ರಲ್ಲಿ 22,060 ರೂ.ಗಳು, 2019-2020ರಲ್ಲಿ 19,220ರೂ.ಗಳು, 2021-2022ರಲ್ಲಿ 1000ರೂ.ಗಳ ಆದಾಯವನ್ನು ತೋರಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿ ಕೋಡ್ಲಿ ಲಕ್ಷಾಧಿಪತಿ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಲ್ಲಿಕಾರ್ಜುನ್ ಎಸ್. ಕೋಡ್ಲಿ ಅವರು ತಮ್ಮ ಆದಾಯವನ್ನು 17,69,580ರೂ.ಗಳನ್ನು ತಮ್ಮ ಚುನಾವಣಾ ಆಸ್ತಿ ವಿವರದಲ್ಲಿ ಒದಗಿಸಿದ್ದಾರೆ.